ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಶಾಂತವ್ವ ಕುಮಾರ ನಿಡಸೋಸಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರಿಗೆ ಆರೈಕೆ ಮಾಡಿ ಮುಸ್ಲೀಂ ದಂಪತಿ ಮಾನವೀಯತೆ ಮೆರೆದ ಘಟನೆ ಬೆಳಕಿಗೆ ಬಂದಿದೆ.
ಏಪ್ರಿಲ್ 14ರಂದು ದಂಡಾಪುರದ ಶಾಂತವ್ವ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆದರೆ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಇದೇ ವೇಳೆ ಪಕ್ಕದ ಬೆಡ್ ಲ್ಲಿದ್ದ ಶಮಾ ರಿಜ್ವಾನ್ ದೇಸಾಯಿ ಎಂಬುವವರು ಶಾಂತವ್ವ ಹಾಗೂ ನವಜಾತ ಶಿಶುವನ್ನು ಉಪಚರಿಸಿದ್ದರು.
ಅಲ್ಲದೇ ಶಮಾ ದಂಪತಿ ಗೋಕಾಕ್ ನ ನವಿ ಗಲ್ಲಿಯ ತಮ್ಮ ನಿವಾಸಕ್ಕೆ ಬಾಣಂತಿ ತಾಯಿ ಶಾಂತವ್ವ ಹಾಗೂ ಮಗುವನ್ನು ಕರೆದುಕೊಂಡು ಹೋಗಿ ಆರೈಕೆ ಮಾಡಿ ಸಂಪೂರ್ಣ ಗುಣಮುಖರಾಗುವವರೆಗೂ ನೋಡಿಕೊಂಡಿದ್ದರು. ಬಾಣಂತಿ ಹಾಗೂ ಮಗುವಿಗೆ ಮಾನವೀಯ ದೃಷ್ಟಿಯಿಂದ ಆರೈಕೆ ಮಾಡಿದ ಮುಸ್ಲಿಂ ದಂಪತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಗಿದೆ. ಇದೀಗ ಬಾಣಂತಿ ಹಾಗೂ ಮಗು ಆರೋಗ್ಯ ಸುಧಾರಿಸಿದ್ದು, ಇಬ್ಬರನ್ನು ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಶಮಾ ಹಾಗೂ ರಿಜ್ವಾನ್ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ದಂಪತಿಯನ್ನು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ