Kannada NewsKarnataka NewsNationalPolitics

ಚುನಾವಣೆ ಸೋಲು ಅರಗಿಸಿಕೊಳ್ಳಲು ಆಗದೆ ಬಿಎಸ್ ವೈ ಮೇಲೆ ರಾಜಕೀಯ ವೈಷಮ್ಯ: ಪ್ರಲ್ಹಾದ ಜೋಶಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಕಾಂಗ್ರೆಸ್ ಗೆ ಲೋಕಸಭೆ ಚುನಾವಣೆ ಸೋಲನ್ನು ಅರಗಿಸಿಕೊಳ್ಳಲಾಗಿಲ್ಲ. ಹೀಗಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ರಾಜಕೀಯ ವೈಷಮ್ಯ ತೋರುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತ ಮರೆಮಾಚಲು ಮಾಜಿ ಸಿಎಂ, 81 ವರ್ಷದ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಷಡ್ಯಂತ್ರ ನಡೆಸುತ್ತಿದೆ ಎಂದು ಸಚಿವ ಜೋಶಿ ಹರಿ ಹಾಯ್ದಿದ್ದಾರೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ಅದನ್ನು ಜೀರ್ಣಿಸಿಕೊಳ್ಳಲಾಗದೆ ಆಡಳಿತವನ್ನು ಮನಬಂದಂತೆ  ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

ಮೂರ್ನಾಲ್ಕು ತಿಂಗಳ ಹಿಂದೆ ಮಾಜಿ ಸಿಎಂ ಬಿ.ಎಸ್.ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ ಮಹಿಳೆ ಮಾನಸಿಕ ಅಸ್ವಸ್ಥಳು, ದುರುದ್ದೇಶದಿಂದ ದೂರು ನೀಡಿದ್ದಾಳೆ ಎಂದು ಆಗಲೇ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಆದರೆ ಈಗ ಚುನಾವಣೆ ಮುಗಿದ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಹೊಸ ಡ್ರಾಮಾ ಶುರು ಮಾಡಿದ್ದಾರೆ ಎಂದು ಜೋಶಿ ಖಂಡಿಸಿದ್ದಾರೆ.

ಆ ಮಹಿಳೆ ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದೂ ಗೃಹ ಮಂತ್ರಿಗಳೇ ಖುದ್ದಾಗಿ ಈ ಹಿಂದೆ ಹೇಳಿದ್ದರು. ಈಗ ತಮ್ಮ ದುರಾಡಳಿತವನ್ನು ಮರೆಮಾಚಲು ಬಿಜೆಪಿ ವರಿಷ್ಠ BSY ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಚಿವ ಜೋಶಿ ಟ್ವೀಟ್ ಮೂಲಕ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಇಲ್ಲ ಸಲ್ಲದ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಎಳೆಯುತ್ತಿರುವುದು ರಾಜಕೀಯ ವೈಷಮ್ಯ ಸರಿ. ಅವರ ಈ ದುರ್ಬುದ್ಧಿಗೆ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button