Kannada NewsKarnataka News

“ಅವಳಿ”ಗೆ ಬೆಳಗಾವಿ ಸೇರಿಸಿ ತ್ರಿವಳಿ ನಗರ ಅಭಿವೃದ್ಧಿ -ಶೆಟ್ಟರ್

“ಅವಳಿ”ಗೆ ಬೆಳಗಾವಿ ಸೇರಿಸಿ ತ್ರಿವಳಿ ನಗರ ಅಭಿವೃದ್ಧಿ -ಶೆಟ್ಟರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹುಬ್ಬಳ್ಳಿ -ಧಾರವಾಡ ಅವಳಿ ನಗರಗಳ ಸಾಲಿಗೆ ಬೆಳಗಾವಿಯನ್ನೂ ಸೇರಿಸಿ ತ್ರಿವಳಿ ನಗರಗಳನ್ನು ಒಟ್ಟಾಗಿ ಅಭಿವೃದ್ಧಿಪಡಿಸುವುದಾಗಿ ರಾಜ್ಯ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಕರ್ನಾಟಕ ಹಾಗೂ ಮಹಾರಾಷ್ಟ್ರದ ಉದ್ಯಮಿಗಳ ಸಮಾವೇಶದಲ್ಲಿ ಹಾಗೂ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಚೆನೈ -ಮುಂಬೈ ಕೈಗಾರಿಕೆ ಕಾರಿಡಾರ್ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರ ಹೆಜ್ಜೆ ಇಟ್ಟಿದೆ. ಹಾಗಾಗಿ ಈ ಭಾಗದಲ್ಲಿ ಕೈಗಾರಿಕೆಗಳು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದಲಿವೆ. ಕರ್ನಾಟಕ- ಮಹಾರಾಷ್ಟ್ರ ಹಗಡಿ ಭಾಗದಲ್ಲಿ ಹೆಚ್ಚಿನ ಆಧ್ಯತೆಯ ಮೇಲೆ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.

ಹೊಸ ಕೈಗಾರಿಕೆ ನೀತಿ 

2014-2019ರ ಕೈಗಾರಿಕೆ ನೀತಿ ಅವಧಿ ಮುಕ್ತಾಯವಾಗಿರುವುದರಿಂದ ಇದೇ ನವೆಂಬರ್ -ಡಿಸೆಂಬರ್ ಹೊತ್ತಿಗೆ ಹೊಸ ಕೈಗಾರಿಕೆ ನೀತಿ ಜಾರಿಗೆ ಬರಲಿದೆ. ಡ್ರಾಪ್ಟ್ ಸಿದ್ದವಾದ ನಾಂತರ ರಾಜ್ಯದ ಎಲ್ಲ ಕೈಗಾರಿಕೆ ಸಂಬಂಧಿ ಸಂಸ್ಥೆಗಳ ಜೊತೆ ಚರ್ಚಿಸಿ ಅದಕ್ಕೆ ಅಂತಿಮ ಸ್ವರೂಪ ನೀಡಲಾಗುವುದು ಎಂದು ಶೆಟ್ಟರ್ ಹೇಳಿದರು.

ಬೇರೆ ಬೇರೆ ರಾಜ್ಯಗಳ ಕೈಗಾರಿಕೆ ನೀತಿಗಳನ್ನೂ ತರಿಸಿ ಅಧ್ಯಯನ ಮಾಡಿ ಮಾದರಿ ಕೈಗಾರಿಕೆ ನೀತಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಸರಕಾರದ ನೆರವಿನೊಂದಿಗೆ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು  ಬೆಳೆಸಲಾಗುವುದು. ಕೈಗಾರಿಕೆಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಮಹಾರಾಷ್ಟ್ರದ ಉದ್ಯಮಿಗಳು ಇಲ್ಲಿ ಬಂಡವಾಳ ಹೂಡಿದರೆ ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಬೆಳಗಾವಿಯಲ್ಲಿಯ ಕೈಗಾರಿಕೆಗಳ ಸಮಸ್ಯೆಗಳನ್ನು ಶಾಸಕ ಅಭಯ ಪಾಟೀಲ ಗಮನಕ್ಕೆ ತಂದಿದ್ದಾರೆ. ಪ್ರತಿ ತಿಂಗಳು ಇಲ್ಲಿಗೆ ಬಂದು ಸಮಸ್ಯೆಗಳನ್ನು ಪರಿಹರಿಸಲಾಗುವುದು . ಬೆಳಗಾವಿಯಲ್ಲಿ ಹೆಚ್ಚಿನ ಆದ್ಯತೆ ಮೇಲೆ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿ, ಬೆಳಗಾವಿಯ ಜನರು ಎಲ್ಲರನ್ನೂ ಕೂಡಿಕೊಂಡು ಹೋಗುವಂತವರು. ಹಾಗಾಗಿ ಮಹಾರಾಷ್ಟ್ರದ ಕೈಗಾರಿಕೊದ್ಯಮಿಗಳು ಇಲ್ಲಿಗೆ ಬಂದರೆ ಅವರ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಲಾಗುವುದು ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ಕೈಗಾರಿಕೆಗಳ ಮೂಲಭೂತ ಸಮಸ್ಯೆಗಳನ್ನು ಶೆಟ್ಟರ್ ಅವರ ಗಮನಕ್ಕೆ ತರಲಾಗಿದೆ. ಇನ್ನು 15 ದಿನದಲ್ಲಿ ಇಲ್ಲಿಗೆ ಮತ್ತೆ ಆಗಮಿಸಿ ಪರಿಹರಿಸುವುದಾಗಿ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ಮಹಾರಾಷ್ಟ್ರದ ಉದ್ಯಮಿಗಳು ಇಲ್ಲಿಗೆ ಬಂದರೆ ಸ್ವಾಗತ. ಇದೇ ವೇಳೆ ಕರ್ನಾಟಕದಲ್ಲಿರುವ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಶ್ರೀಧರ ಉಪ್ಪಿನ್, ಬಸವರಾಜ ಜವಳಿ, ಮಹಾರಾಷ್ಟ್ರ ಹಾಗೂ ಬೆಳಗಾವಿಯ ವಿವಿಧ ಉದ್ಯಮಿಗಳು ಮಾತನಾಡಿದರು. ಕೈಗಾರಿಕೆ ಇಲಾಖೆಯ ಆಯುಕ್ತ ಗೌರವ ಗುಪ್ತ ಪ್ರಾಸ್ತಾವಿಕ ಮಾತನಾಡಿದರು. ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಸ್ತಾವನೆ ಸಲ್ಲಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, ಮಹಾರಾಷ್ಟ್ರದ ಉದ್ಯಮಿಗಳು ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಅವುಗಳನ್ನು ಪರಿಶೀಲಿಸಿ ಮುಂದಿನ ಹಂತದ ಚರ್ಚಿ ನಡೆಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಕೈಗಾರಿಕೆಗಳನ್ನು ಉತ್ತರಕರ್ನಾಕಟ ಮತ್ತು ಬೆಳಗಾವಿಗೆ ತರಲು ಪ್ರಯತ್ನಿಸಲಾಗುವುದು. 2ನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಲಾಗುದು. ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು. ಈ ವಿಷಯದಲ್ಲಿ ಅಧಿಕಾರಿಗಳು ದಾರಿ ತಪ್ಪಿಸಲು ಪ್ರಯತ್ನಿಸಿದರೆ ಅದಕ್ಕೆಲ್ಲ ಬಗ್ಗುವುದಿಲ್ಲ ಎಂದು ಶೆಟ್ಟರ್ ತಿಳಿಸಿದರು.

ಕೈಗಾರಿಕೆ ಶೆಡ್ ಹಾಗೂ ಜಾಗಗಳನ್ನು ಪಡೆದು ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಅಂತಹ ಜಾಗಗಳನ್ನು ವಾಪಸ್ ಪಡೆಯಲಾಗುವುದು. ಇದು ರಿಯಲ್ ಎಸ್ಟೇಟ್ ದಂಧೆಯಾಗಲು ಅವಕಾಶ ಕೊಡುವುದಿಲ್ಲ. ಕೈಗಾರಿಕೆ ಅದಾಲತ್ ನಡೆಸಿ, ಪೂರಕವಾದ ಇಲಾಖೆಗಳನ್ನೂ ಕರೆಸಿ ಎಲ್ಲ ರೀತಿಯ ಸಮಸ್ಯೆಗಳನ್ನು ನಿವಾರಿಸಲಾಗುವುದು.

ರಾಜಕೀಕರಣ ಸರಿಯಲ್ಲ

ಡಿ.ಕೆ.ಶಿವಕುಮಾರ ತಪ್ಪು ಮಾಡಿಲ್ಲವಾದರೆ ವಿಚಾರಣೆ ಎದುರಿಸಬೇಕು. ಅನಗತ್ಯವಾಗಿ ವಿಷಯವನ್ನು ರಾಜಕೀಕರಣ ಮಾಡುವುದಾಗಲಿ, ಸಮುದಾಯ ಎತ್ತಿ ಕಟ್ಟುವುದಾಗಲಿ ಮಾಡಬಾರದು ಎಂದು ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ಆದಷ್ಟು ಶೀಘ್ರ ನೇಮಕಮಾಡಲಾಗುತ್ತದೆ. ಅದಾಗದಿದ್ದರೂ ಆಡಳಿತ ವ್ಯವಸ್ಥೆಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ತಿಳಿಸಿದರು.

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಾಜಿ ಸಂಸದ ಅಮರಸಿಂಹ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ರಾಜೇಂದ್ರ ಹರಕುಣಿ,  ಶಶಿಕಾಂತ ಸಿದ್ನಾಳ ಮೊದಲಾದವರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button