LatestLife Style

*ಮಹಿಳೆಯರು ಸ್ತನಕ್ಯಾನ್ಸರ್‌ನ ಬಗ್ಗೆ ಜಾಗೃತಿ ಹೊಂದುವುದು ಅವಶ್ಯಕ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌*

ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ “ಪಿಂಕ್‌ ಸ್ಟ್ರಾಂಗ್‌” ವಾಕಥಾನ್‌

ಪ್ರಗತಿವಾಹಿನಿ ಸುದ್ದಿ: ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಸ್ತನ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು “ಪಿಂಕ್‌ ಸ್ಟ್ರಾಂಗ್‌” ವಾಕಥಾನ್‌ನನ್ನು ಆಯೋಜಿಸಿತ್ತು.

ಬೆಳಗ್ಗೆ 6 ಗಂಟೆಗೆ ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯಿಂದ ಪ್ರಾರಂಭಗೊಂಡ ವಾಕಥಾನ್‌ ಗೋಪಾಲನ್‌ ಮಾಲ್‌ವರೆಗೆ ಮುಕ್ತಾಯಗೊಂಡಿತು. ಸುಮಾರು 5 ಕಿ.ಮೀ ದೂರದ ಈ ವಾಕಥಾನ್‌ನಲ್ಲಿ ಸ್ತನಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿಗಳು ಹಾಗೂ ಅವರ ಕುಟುಂಬಸ್ಥರು, ಸಾರ್ವಜನರಿಕರು ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಒಟ್ಟು 450 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ವಾಕಥಾನ್‌ನಲ್ಲಿ ಭಾಗವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಇಂದು ಸಾಕಷ್ಟು ಮಹಿಳೆಯರನ್ನು ಬಾಧಿಸುತ್ತಿರುವ ಕಾಯಿಲೆಗಳ ಪೈಕಿ ಸ್ತನಕ್ಯಾನ್ಸರ್‌ ಕೂಡ ಒಂದು. ಹೆಣ್ಣು ಮಕ್ಕಳು, ಮಹಿಳೆಯರು ಸ್ತನಕ್ಯಾನ್ಸರ್‌ ರೋಗ ಲಕ್ಷಣದ ಬಗ್ಗೆ ಮೊದಲೇ ತಿಳಿದಿದ್ದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ. ಆದರೆ ಸಾಕಷ್ಟು ಮಹಿಳೆಯರಿಗೆ ಇದರ ಬಗ್ಗೆ ಜಾಗೃತಿಯ ಕೊರತೆ ಇದೆ, ಮೊದಲು ಸ್ತನ ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಹೊಂದಿರಬೇಕು, ಫೋರ್ಟಿಸ್‌ ಆಸ್ಪತ್ರೆಯು ಸ್ತನ ಕ್ಯಾನ್ಸರ್‌ ಮಾಸದ ಭಾಗವಾಗಿ ಈ ವಾಕಥಾನ್‌ ನಡೆಸುವ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಫೋರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಯ ಹಿರಿಯ ಸಲಹೆಗಾರರಾದ ಡಾ, ಮೋನಿಕಾ ಪನ್ಸಾರಿ ಮಾತನಾಡಿ, ಇಂದು ಸ್ತನಕ್ಯಾನ್ಸರ್‌ ಹೆಚ್ಚಾಗಿ ಕಡಿಮೆ ವಯಸ್ಸಿನ ಮಹಿಳೆಯರಲ್ಲೇ ಕಾಣಿಸುತ್ತಿದೆ, ಅಧ್ಯಯನಗಳ ಪ್ರಕಾರ ಸುಮಾರು ಶೇ.48 ರಷ್ಟು ರೋಗಿಗಳಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಇರುವುದು ಆಘಾತಕಾರಿ. ಹೀಗಾಗಿ ಹೆಣ್ಣುಮಕ್ಕಳಿಂದಲೇ ಸ್ತನ ಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಿಸುತ್ತಾ ಹೋದರೆ, ಭವಿಷ್ಯದಲ್ಲಿ ಆಗುವ ಅಪಾಯವನ್ನು ತಡೆಗಟ್ಟಬಹುದು. ಸ್ತನ ಕ್ಯಾನ್ಸರ್‌ ಇರುವ ಬಗ್ಗೆ ಮಹಿಳೆಯರೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು, ಒಂದು ವೇಳೆ ತಮ್ಮ ಸ್ತನದಲ್ಲಿ ಗಂಟಿನ ರೀತಿ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಿ ತಪಾಸಣೆಗೆ ಒಳಗಾಗುವುದು ಒಳ್ಳೆಯದು. ಇನ್ನು, ಮಹಿಳೆಯರು ಆರೋಗ್ಯಕರ ಜೀವನ ಶೈಲಿ ರೂಡಿಸಿಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button