*ಖಾನಾಪುರದಲ್ಲಿ 70ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಕಾಲ್ನಡಿಗೆ ಜಾಥಾ*
ಪ್ರಗತಿವಾಹಿನಿ ಸುದ್ದಿ: 70ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ಬೆಳಗಾವಿ ಪ್ರಾದೇಶಿಕ ವಲಯದ ವತಿಯಿಂದ ಭಾನುವಾರ ತಾಲೂಕಿನ ಶಿರೋಲಿಯಿಂದ ಹೆಮ್ಮಡಗಾವರೆಗಿನ 7 ಕಿಮೀ ದೂರದ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು.
ಜಾಥಾಗೆ ಚಾಲನೆ ನೀಡಿದ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, “ನಮ್ಮ ಮುಂದಿನ ಪೀಳಿಗೆಗಾಗಿ ವನ್ಯ ಸಂಪತ್ತನ್ನು ಸಂರಕ್ಷಿಸಿ ಇಡುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲದ ಮೇಲಿದೆ” ಎಂದರು.
“ಇಡೀ ಪ್ರಪಂಚ ನಮ್ಮ ವನ್ಯಸಂಪತ್ತು ಮತ್ತು ವನ್ಯಜೀವಿಗಳ ಮೇಲೆ ಅವಲಂಬಿಸಿದೆ. ಅರಣ್ಯಗಳು ಪ್ರಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವನ್ಯಜೀವಿಗಳು ಅರಣ್ಯದ ಮೆರುಗು ಮತ್ತು ವೈಭವ ಹೆಚ್ಚಿಸುತ್ತವೆ. ಅರಣ್ಯ ಸಮೃದ್ಧವಾಗಿದ್ದರೆ ಉತ್ತಮ ಮಳೆ-ಬೆಳೆ ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು. ಉತ್ತಮ ಮಳೆ-ಬೆಳೆ ಇದ್ದರೆ ಎಲ್ಲರೂ ಸುಖವಾಗಿರಬಹುದು. ಹೀಗಾಗಿ ಇಂತಹ ಸಮೃದ್ಧವಾದ ಅರಣ್ಯ ಪ್ರದೇಶವನ್ನು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ನಾವೆಲ್ಲರೂ ಕಟಿಬದ್ಧರಾಗಬೇಕು” ಎಂದು ಕರೆ ನೀಡಿದರು.
ಶಿರೋಲಿಯಿಂದ ಆರಂಭಗೊಂಡ ಜಾಥಾ 7 ಕಿಮೀ ದೂರದ ಹೆಮ್ಮಡಗಾ ಬಳಿಯ ಭೀಮಗಡ ಪ್ರಕೃತಿ ಶಿಬಿರದಲ್ಲಿ ಸಂಪನ್ನಗೊಂಡಿತು. ಅರಣ್ಯ ಇಲಾಖೆಯ ಬೆಳಗಾವಿ ವಿಭಾಗದ ವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಲಯನ್ಸ್ ಕ್ಲಬ್ ಸದಸ್ಯರು, ಶಾಂತಿನಿಕೇತನ ಪಿಯು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಸಾರ್ವಜನಿಕರು, ಶಿರೋಲಿ, ಅಬನಾಳಿ, ಹೆಮ್ಮಡಗಾ ಹಾಗೂ ಅಕ್ಕಪಕ್ಕದ ಗ್ರಾಮಗಳ ನಾಗರಿಕರು ಸೇರಿದಂತೆ ನೂರಾರು ಜನರು ಜಾಥಾದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದರು.
ಹೆಮ್ಮಡಗಾ ಪ್ರಕೃತಿ ಶಿಬಿರದಲ್ಲಿ ಸಂಪನ್ನಗೊಂಡ ಸಮಾರೋಪ ಸಮಾರಂಭದಲ್ಲಿ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಬೆಳಗಾವಿ ವೃತ್ತದ ಸಿ.ಸಿ.ಎಫ್ ಮಂಜುನಾಥ ಚವಾಣ, “ಅರಣ್ಯ ಸಂಪತ್ತನ್ನು ಉಳಿಸಲು ಮತ್ತು ವನ್ಯಜೀವಿಗಳ ಸಂರಕ್ಷಿಸಲು ಅರಣ್ಯ ಇಲಾಖೆಯೊಂದಿಗೆ ಸಮುದಾಯದ ಸಹಭಾಗಿತ್ವ ಅವಶ್ಯ. ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಲಾಖೆ ಸಾರ್ವಜನಿಕರಿಗಾಗಿ ಮುಕ್ತ ಕಾಲ್ನಡಿಗೆ ಜಾಥಾ ಆಯೋಜಿಸಿದ್ದು, ಜಾಥಾದಲ್ಲಿ ಬಹಳಷ್ಟು ಜನರು ಭಾಗವಹಿಸುವ ಮೂಲಕ ಇಲಾಖೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಡಿ.ಸಿ.ಎಫ್ ಮರಿಯ ಕ್ರಿಸ್ತು ರಾಜಾ ಡಿ, ಖಾನಾಪುರ ಎ.ಸಿ.ಎಫ್ ಸುನೀತಾ ನಿಂಬರಗಿ, ನಾಗರಗಾಳಿ ಎ.ಸಿ.ಎಫ್ ಶಿವಾನಂದ ಮಗದುಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹೂತ, ಲೈಲಾ ಶುಗರ್ಸ್ ಎಂ.ಡಿ ಸದಾನಂದ ಪಾಟೀಲ, ಕಾಂಗ್ರೆಸ್ ಮುಖಂಡ ಸುರೇಶ ಜಾಧವ, ಲಯನ್ಸ್ ಕ್ಲಬ್ ಅಧ್ಯಕ್ಷ ರವಿಸಾಗರ ಉಪ್ಪಿನ, ನಿವೃತ್ತ ಅರಣ್ಯಾಧಿಕಾರಿ ಎಂ.ಜಿ ಬೆನಕಟ್ಟಿ ಮತ್ತಿತರರು ಭಾಗವಹಿಸಿದ್ದರು. ಖಾನಾಪುರ ಆರ್.ಎಫ್.ಒ ಶ್ರೀಕಾಂತ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಎಂ.ಜಿ ನಂದೆಪ್ಪಗೋಳ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ