700 ರೂ. ಲಂಚ : ಇಬ್ಬರಿಗೆ ಎರಡು ವರ್ಷ ಕಠಿಣ ಶಿಕ್ಷೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಟಕಭಾವಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯಾದ ಅಶೋಕ ಶ್ರೀಮಂದರ ಚೌಗುಲೆ ಮತ್ತು ಕ್ಲರ್ಕ್ ಸಂಗಪ್ಪ ಪರಪ್ಪ ದಾವಣಿ ಇವರಿಬ್ಬರೂ ಲಂಚ ಪಡೆಯುತ್ತಿರುವ ವೇಳೆ ಟ್ರ್ಯಾಪ್ ಮಾಡಲಾಗಿತ್ತು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಟಕಭಾವಿ ಗ್ರಾಮದ ಅಮೀನಾ ಮಲಿಕಸಾಬ ಅರಭಾವಿ ಅವರ ಗಂಡ ಮಲೀಕಸಾಬ ಅರಭಾವಿ ಅವರ ಹೆಸರಿನಲ್ಲಿದ್ದ ಮನೆಯನ್ನು ಅಮೀನಾ ಹೆಸರಿನಲ್ಲಿ ಆಸ್ತಿ ರಜಿಸ್ಟರ್ ನಲ್ಲಿ ದಾಖಲು ಮಾಡಿಕೊಡಲು ಕಟಕಭಾವಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಅಶೋಕ ಶ್ರೀಮಂದರ ಚೌಗುಲೆ ಮತ್ತು ಕ್ಲರ್ಕ್ ಸಂಗಪ್ಪ ಪರಪ್ಪ ದಾವಣಿ ಇವರಿಬ್ಬ ಒಟ್ಟು 700 ರೂ. ಲಂಚವನ್ನು ಪಡೆದುಕೊಳ್ಳುವಾಗ 2006ರ ಜುಲೈ 24ರಂದು ಟ್ರ್ಯಾಪ್ ಮಾಡಲಾಗಿತ್ತು.
ಪ್ರಕರಣದ ವಿಚಾರಣೆಯನ್ನು 4ನೇ ಅಧಿಕ ಸತ್ರ ಮತ್ತು ಲಂಚ ನಿರ್ಮೂಲನಾ ಕಾಯ್ದೆಯಡಿಯ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಧೀಶರಾದ ರಾಜೇಂದ್ರ ಎಮ್. ಬದಾಮಿಕರ ಇವರು ಆರೋಪಿತದಾರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಕ. ಲಂ ೭ ಮತ್ತು ೧೩(೧)ಡಿ ಸಹ ಕಲಂ ೧೩(೨) ಅಪಾದನೆಗಳಿಗೆ ತಲಾ ಎರಡು ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ ದಂಡ ವಿಧಿಸಿ ಆದೇಶವನ್ನು ಮಾಡಿದ್ದಾರೆ.
ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಠಾಣೆ ಪೊಲೀಸ್ ಇನ್ಸಪೆಕ್ಟರ ಜಿ.ಸಿ ರವಿಕುಮಾರ ಮಾಡಿದ್ದರು ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ವಿಜಯಕುಮಾರ್ ಗುಂಜಾಳರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ೪ನೇ ಜಿಲ್ಲಾ ಹೆಚ್ಚುವರಿ & ಸತ್ರ ನ್ಯಾಯಾಲಯ ಗುರುವಾರ ಆರೋಪಿತ ಅಧಿಕಾರಿಯ ವಿರುದ್ದ ಕನ್ವಿಕ್ಷನ್ ವಾರೆಂಟ್ ಹೊರಡಿಸಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ