*ಕುಂಭ ಮೇಳದಲ್ಲಿ ಸಿಲುಕಿದವರ ರಕ್ಷಣೆಗೆ ನಾವು ಸಿದ್ಧ: ಜಿಲ್ಲಾಧಿಕಾರಿ ಮೋಹಮ್ಮದ್ ರೋಷನ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತ ಮಾಹಿತಿ ನೀಡಿದ ಅವರು, ಗಾಯಾಳುಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಆದರೆ, ತೊಂದರೆಯಲ್ಲಿ ಸಿಲುಕಿದವರ ರಕ್ಷಣೆಗೆ ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
ಇಂದು ಬೆಳಗ್ಗೆ ಕಾಲ್ತುಳಿತ ಆಗಿದೆ ಅಂತಾ ತಿಳಿಯಿತು. ಬೆಳಗಾವಿ ಜಿಲ್ಲೆಯ 30 ಜನರ ತಂಡ ಪ್ರಯಾಗ್ ರಾಜ್ ಗೆ ಹೋಗಿತ್ತು. ಈಗ ಒಬ್ಬರಿಗೊಬ್ಬರ ಸಂಪರ್ಕ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದು ಈಗ ಆರೇಳು ತಾಸು ಅಷ್ಟೇ ಆಗಿದೆ. ಅಲ್ಲಿ ಸೇರಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಅಮವಾಸ್ಯೆ ಸ್ನಾನಕ್ಕೆಂದು 8 ಕೋಟಿಗೂ ಅಧಿಕ ಜನ ಸೇರುವ ಸಂದರ್ಭ ಸೃಷ್ಟಿಯಾಗಿದೆ. ಅದರಿಂದ ಯಾತ್ರಾರ್ಥಿಗಳ ಪೋಷಕರು ಯಾವುದೇ ರೀತಿ ಭಯ ಪಡುವ ಅಗತ್ಯತೆ ಇಲ್ಲ ಎಂದರು.
ಟ್ರಾವೆಲ್ ಏಜೆನ್ಸಿ ಸೇರಿ ಎಲ್ಲರ ಜೊತೆಗೂ ನಾವು ಸಂಪರ್ಕದಲ್ಲಿದ್ದೇವೆ. ಉತ್ತರ ಪ್ರದೇಶದ ಜಿಲ್ಲಾಡಳಿತ ಜೊತೆಗೆ ನಾನು ಸಂಪರ್ಕದಲ್ಲಿದ್ದೇನೆ. ಹಾಗಾಗಿ, ಜಿಲ್ಲಾಡಳಿತ ಮತ್ತು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಅದೇ ರೀತಿ ವಿಶೇಷ ಜಿಲ್ಲಾಧಿಕಾರಿಗಳು, ಐಪಿಎಸ್ ಅಧಿಕಾರಿಗಳ ಸಂಪರ್ಕದಲ್ಲೂ ನಾವಿದ್ದೇವೆ ಎಂದರು.
ಈಗಲೇ ನಾಪತ್ತೆ ಅಂತಾ ಹೇಳಲು ಬರಲ್ಲ. 24 ಗಂಟೆ ಆದ ಬಳಿಕ ನಾಪತ್ತೆ ಆಗಿರುವವರ ವಿವರವನ್ನು ಘೋಷಿಸುತ್ತೇವೆ. 6-8 ಕೋಟಿ ಜನ ಒಂದೇ ನಗರದಲ್ಲಿ ಸಮಾವೇಶಗೊಂಡಿದ್ದಾರೆ. ಹಾಗಾಗಿ, ಆತಂಕ ಸೃಷ್ಟಿಯಾಗಿದೆ. ನಮ್ಮನ್ನು ಸಂಪರ್ಕಿಸಿದ ಮಹಿಳೆ ಆತಂಕದಲ್ಲಿದ್ದರು. ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದೇವೆ. ಅವರ ಜೊತೆಗೆ ಮಿಸ್ಸಿಂಗ್ ಆದವರನ್ನು ಸ್ಥಳೀಯ ಪೊಲೀಸರ ಸಹಾಯದಿಂದ ಒಂದೆಡೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಬೆಳಗಾವಿಯವರು ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಅಲ್ಲಿ ತೊಂದರೆಯಲ್ಲಿ ಸಿಲುಕಿದವರು ನಮ್ಮ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು. ಸಹಾಯವಾಣಿ ತೆರೆಯಲಾಗಿದೆ. ವೆಬ್ಸೈಟ್ನಲ್ಲಿ ನಮ್ಮ ನಂಬರ್ ಇದೆ, ಅಗತ್ಯತೆ ಇದ್ದವರು ಸಂಪರ್ಕಿಸಬಹುದು ಎಂದರು.
ಬೆಳಗಾವಿ ಜಿಲ್ಲೆಯಿಂದ ಎಷ್ಟು ಜನರು ಪ್ರಯಾಗ್ ರಾಜ್ ಗೆ ತೆರಳಿದ್ದಾರೆ ಎಂಬುದು ಗೊತ್ತಾಗಿಲ್ಲ. ಯಾಕೆಂದರೆ ಬಹಳಷ್ಟು ಜನರು ರೈಲ್ವೆ, ಖಾಸಗಿ ಟ್ರಾವೆಲ್ಸ್, ಸ್ವಂತ ವಾಹನಗಳಲ್ಲಿ ಹೋಗಿದ್ದಾರೆ. ಹಾಗಾಗಿ, ನಿಖರವಾಗಿ ಇಷ್ಟೇ ಜನರು ಹೋಗಿದ್ದಾರೆ ಎಂಬುದನ್ನು ಹೇಳಲು ಆಗಲ್ಲ. ಆದರೆ, ಅಲ್ಲಿ ಯಾರಿಗೆ ತೊಂದರೆ ಆದರೂ ಅವರಿಗೆ ಸಹಾಯಕ್ಕೆ ನಾವು ಸಿದ್ಧ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ