NationalPolitics

*ರಾಜ್ಯಕ್ಕೆ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚೇ ತೆರಿಗೆ ಹಂಚಿಕೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚೇ ತೆರಿಗೆ ಹಂಚಿಕೆ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಈ ಬಗ್ಗೆ ಅಗತ್ಯ ಮಾಹಿತಿ ಹಂಚಿಕೊಂಡಿರುವ ಸಚಿವರು, 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹51,876 ಕೋಟಿ ತೆರಿಗೆ ಹಂಚಿಕೆ ಮಾಡಿದೆ ಎಂದಿದ್ದಾರೆ.

2014-15ರಲ್ಲಿ 24,789.78 ಕೋಟಿ ತೆರಿಗೆ ಹಂಚಿಕೆ ಆಗಿದ್ದರೆ, 2025-2 6ರ ಆರ್ಥಿಕ ವರ್ಷ ಇದಕ್ಕಿಂತ ಶೇ.108ರಷ್ಟು (51876 ಕೋಟಿ ರೂ.)ಅಧಿಕ ತೆರಿಗೆ ಹಂಚಿಕೆ ಮೊತ್ತವನ್ನು ಕರ್ನಾಟಕಕ್ಕೆ ಭರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ‌ಮೋದಿ ಅವರ ನಾಯಕತ್ವದಲ್ಲಿ ಕರ್ನಾಟಕ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

15ನೇ ಹಣಕಾಸು ಆಯೋಗದಿಂದ ಕರ್ನಾಟಕದ ತೆರಿಗೆ ಪಾಲು ಶೇ.3.647ರಷ್ಟು ಎಂದು ನಿಗದಿಪಡಿಸಲಾಗಿದೆ. 2004-2014ರ ದಶಕದ ಅವಧಿಯಲ್ಲಿ ರಾಜ್ಯಕ್ಕೆ ಕೇವಲ ₹81,795 ಕೋಟಿ ರೂಪಾಯಿ ನೀಡಲಾಗಿತ್ತು. 2014-2024ರ‌‌ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಬರೋಬ್ಬರಿ ₹2,85,452 ಕೋಟಿ ತೆರಿಗೆ ಹಂಚಿಕೆ ಮಾಡಿದೆ ಎಂದು ಅಂಕಿ ಅಂಶ ಸಹಿತ ವಿವರಣೆ ನೀಡಿದ್ದಾರೆ.

15 ರೈಲ್ವೆ ಯೋಜನೆ

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರೊಬ್ಬರಿ ₹7,564 ಕೋಟಿ ವೆಚ್ಚದಲ್ಲಿ 15 ನಿರ್ಣಾಯಕ ರೈಲ್ವೆ ಯೋಜನೆಗಳನ್ನು ನೀಡಿದೆ. ಇದು ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಸ್ಟಾರ್ಟ್ ಅಪ್ ಗೆ ತೆರಿಗೆ ವಿನಾಯಿತಿ

ಇನ್ನು, ಸ್ಟಾರ್ಟ್‌ ಅಪ್‌ಗಳಿಗೆ 10 ವರ್ಷಗಳ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದ್ದು, (ಏಪ್ರಿಲ್ 2030 ರವರೆಗೆ ಅನ್ವಯಿಸಲಿದೆ) ಜತೆಗೆ ₹10,000 ಕೋಟಿ ಅನುದಾನ ಸಹ ನೀಡಲಾಗಿದೆ ಎಂದಿದ್ದಾರೆ.

ಕರ್ನಾಟಕದ ಬೆಳವಣಿಗೆಗೆ ಈ ಬಲಿಷ್ಠ ಸುಧಾರಣೆ ಕ್ರಮಗಳು ಮತ್ತು ದೊಡ್ಡ ಅವಕಾಶಗಳು‌ ಉಜ್ವಲ  ಭವಿಷ್ಯ ರೂಪಿಸಲಿವೆ. ಇದರೊಂದಿಗೆ ಕರ್ನಾಟಕ ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಲ್ಹಾದ ಜೋಶಿ ಆಶಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button