Latest

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ, ಅಮಿತಾಬ್, ರಜನಿಕಾಂತ್ ಉಪಸ್ಥಿತಿ

ಪ್ರಗತಿವಾಹಿನಿ ಸುದ್ದಿ, ಪಣಜಿ:  ಚಲನಚಿತ್ರಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಜಗತ್ತಿನಾದ್ಯಂತ ಪ್ರೇಕ್ಷಕರು ಭಾರತೀಯ ಚಲನಚಿತ್ರಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇದು ಭಾರತದ ಸಾಪ್ಟ್ ಪವರ್. ಇದನ್ನು ಇನ್ನೂ ಹೆಚ್ಚು ಅಭಿವೃದ್ಧಿಪಡಿಸಬೇಕಿದೆ. ಸಿಂಗಲ್ ವಿಂಡೊ ಜಾರಿಗೆ ತರುವ ಮೂಲಕ ದೇಶಾದ್ಯಂತ ಚಲನಚಿತ್ರ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಮಂತ್ರಿ ಪ್ರಕಾಶ್ ಜಾವಡೇಕರ್ ನುಡಿದರು.

ಪಣಜಿಯ ಬಾಂಬೋಲಿಂ ಬಳಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ೫೦ ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

೫೦ ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ೯ ದಿನಗಳ ದೊಡ್ಡ ಜಾತ್ರೆ ಗೋವಾದಲ್ಲಿ ನಡೆಯುತ್ತಿದೆ. ಈ ಮೂಲಕ ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ರವರಿಗೆ ಶೃದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದು ಜಾವಡೇಕರ್ ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ನೆರವೇರಿಸಿದ ಬಾಲಿವುಡ್ ಖ್ಯಾತಿಯ ಬಿಗ್‌ಬಿ ಅಮಿತಾಬ್ ಬಚ್ಚನ್ ಮಾತನಾಡಿ- ಸಾಕಷ್ಟು ಏಳು ಬೀಳುಗಳ ಸಂದರ್ಭದಲ್ಲಿ ಜನತೆ ನನ್ನೊಂದಿಗಿದ್ದಾರೆ. ಇದರಿಂದಾಗಿ ನಾನು ಜನತೆಗೆ ಆಭಾರಿಯಾಗಿದ್ದೇನೆ. ಜನತೆಯ ಋಣ ನನ್ನ ಮೇಲಿದೆ. ಈ ಋಣವನ್ನು ನಾನು ಎಂದೂ ತೀರಿಸಲು ಇಷ್ಟಪಡುವುದಿಲ್ಲ ಎಂದರು.

ಗೋಲ್ಡನ್ ಜುಬಲಿ ಅವಾರ್ಡ ಸ್ವೀಕರಿಸಿದ ಸೂಪರ್ ಸ್ಟಾರ್ ರಜನೀಕಾಂತ ಮಾತನಾಡಿ- ಈ ಅವಾರ್ಡ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಈ ಅವಾರ್ಡ ನನ್ನ ಚಲನಚಿತ್ರಗಳ ನಿರ್ದೇಶಕರು, ತಂತ್ರಜ್ಞರು, ಎಲ್ಲ ಕಲಾವಿದರಿಗೂ ಸೇರಿದ್ದು ಎಂದರು.

ಚಲನಚಿತ್ರೋತ್ಸವದಲ್ಲಿ ಉಪಸ್ಥಿತರಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಗೋವಾ ರಾಜ್ಯವನ್ನು ಫಿಲ್ಮ್ ಶೂಟಿಂಗ್ ಡೆಸ್ಟಿನೇಶನ್ ಆಗಿ ಮಾಡುವುದು ನಮ್ಮ ಕನಸಾಗಿದೆ. ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ರವರ ಮೂಲಕ ಗೋವಾ ರಾಜ್ಯವು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯ ಖಾಯಂ ಸ್ಥಳವಾಗಿದೆ ಎಂದರು.

೫೦ ನೇಯ ವರ್ಷದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸವಿನೆನಪಿಗಾಗಿ ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು. ಖ್ಯಾತ ನಟಿ ಇಸಬೆಲ್ ಹುಬೆರ್ಟ ರವರಿಗೆ ಲೈಫ್‌ಟೈಮ್ ಅಚೀವ್ ಮೆಂಟ್ ಅವಾರ್ಡ ನೀಡಿ ಗೌರವಿಸಲಾಯಿತು.

ಬಾಲಿವುಡ್ ಖ್ಯಾತಿಯ ಅಮಿತಾಬ್ ಬಚ್ಚನ್ ರವರನ್ನು ಸನ್ಮಾನಿಸಲಾಯಿತು. ಚಲನಚಿತ್ರೋತ್ಸವ ಉಧ್ಘಾಟನಾ ಸಮಾರಂಭದ ಆರಂಭದಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ರಕ್ಷಣಾ ಮಂತ್ರಿ ದಿ.ಮನೋಹರ್ ಪರೀಕರ್ ರವರ ಜೀವನಾಧಾರಿತ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

ಮಹೋತ್ಸವದಲ್ಲಿ ಖ್ಯಾತ ಗಾಯಕ ಶಂಕರ್ ಮಹದೇವನ್ ರವರು ತಮ್ಮ ಗಾನಸುಧೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮಹೋತ್ಸವದಲ್ಲಿ ೭೦ ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಾರ್ತಾ ಮತ್ತು ಪ್ರಸರಣ ಖಾತೆಯ ಕಾರ್ಯದರ್ಶಿ ಅಮಿತ್ ಖಾತೆ ಸ್ವಾಗತ ಕೋರಿದರು. ಕರಣ್ ಜೋಹರ್ ಕಾರ್ಯಕ್ರಮ ನಿರೂಪಿಸಿದರು.

ನವೆಂಬರ್ ೨೮ ರವರೆಗೆ ಪಣಜಿಯ ವಿವಿಧ ಚಿತ್ರಮಂದಿರ ಮತ್ತು ಓಪನ್ ಥಿಯೇಟರ್‌ಗಳಲ್ಲಿ ದೇಶ-ವಿದೇಶಗಳ ಆಯ್ದ ೨೫೦ ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮಹದಾಯಿ ಹೋರಾಟದ ಬಿಸಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button