Belagavi NewsBelgaum NewsKannada NewsKarnataka NewsNational

*ಐಪಿಎಲ್ ಆಡುವ ಆಸೆಗೆ 24 ಲಕ್ಷ ಕಳೆದುಕೊಂಡ ಯುವಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐಪಿಎಲ್ ಕ್ರಿಕೆಟ್ ಆಸೆಗೆ ಬಿದ್ದ ಯುವ ಕ್ರಿಕೆಟಿಗನೊಬ್ಬ 24 ಲಕ್ಷ ಹಣ  ಕಳೆದುಕೊಂಡು ಬೀದಿಗೆ ಬಿದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಯುವ ಕ್ರಿಕೆಟಿಗ ಇನಸ್ಟಾಗ್ರಾಮ್ ನಲ್ಲಿ ಬಂದ ಒಂದು ಮೆಸೇಜ್ ನಿಂದಾಗಿ 24ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ ಯಡುರೆ(19) 24ಲಕ್ಷ ರೂಪಾಯಿ ಹಣ ಕಳೆದುಕೊಂಡ ಉದಯೋನ್ಮುಖ ಕ್ರಿಕೆಟಿಗ. ರಾಜ್ಯಮಟ್ಟ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿದ್ದ ರಾಕೇಶಗೂ ಎಲ್ಲರಂತೆ ಐಪಿಎಲ್ ಆಡಬೇಕೆಂಬ ಮಹದಾಸೆ ಜತೆಗೆ ಆತನಲ್ಲಿ ಅಷ್ಟೇ ಪ್ರತಿಭೆ ಕೂಡ ಇತ್ತು.

Home add -Advt

ಹೀಗಾಗಿ ಆತ ಕಳೆದ 2024ರ ಮೇ ತಿಂಗಳಲ್ಲಿ ಹೈದರಾಬಾದ್ ನಲ್ಲಿ ನಡೆದಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಬಂದಿದ್ದನು. ಆಗ ನಡೆದ ಪಂದ್ಯಾವಳಿಯಲ್ಲಿ ಸಂದರ್ಭದಲ್ಲಿ ಕ್ರಿಕೆಟ್ ಸಮಿತಿ ಆಯ್ಕೆಗಾರರು ಬಂದಿದ್ದರಂತೆ. ಚೆನ್ನಾಗಿಯೇ ಆಡಿ ಮನೆಗೆ ಬಂದಿದ್ದ ರಾಕೇಶನಿಗೆ ನಾಲ್ಕು ತಿಂಗಳ ಬಳಿಕ ಇನಸ್ಟ್ರಾಗ್ರಾಮ್ ನಲ್ಲಿ ಬಂದ ಅದೊಂದು ಸಂದೇಶಕ್ಕೆ ಇವತ್ತು ಬೆಲೆ ತರುವಂತಾಗಿದೆ.

 ಇನಸ್ಟ್ರಾಗ್ರಾಮನಲ್ಲಿ ( Sushant_srivastava1)ಎಂಬ ಹೆಸರಿನ ಅಕೌಂಟ್ ನಿಂದ ಒಂದು ಮೆಸೇಜ್ ಬರುತ್ತೆ. ಆ ಮೆಸೇಜ್ ನಲ್ಲಿ ನಿಮ್ಮನ್ನು ರಾಜಸ್ಥಾನ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಇದೊಂದು ಅಪ್ಲಿಕೇಶನ್ ಫಾರ್ಮ್ ತುಂಬಿ 2ಸಾವಿರ ರೂಪಾಯಿ ಕಳುಹಿಸಿ ಅಂತಾ ಇರುತ್ತದೆ. ಇನಸ್ಟಾದಲ್ಲಿ ಬಂದಿರುವ ಮೆಸೇಜ್ ನಂಬಿದ್ದ ರಾಕೇಶ ಬಳಿ ಹಂತಹಂತವಾಗಿ 24ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.

ಪ್ರತಿ ಮ್ಯಾಚ್ ಗೆ 40ಸಾವಿರ ಹಾಗೂ 8ಲಕ್ಷ ಹಣ ಕೊಡಿಸುತ್ತೇವೆ ಎಂದು ನಂಬಿಸಿ ಕಳೆದ 2024ರ ಡಿಸೆಂಬರ್ 22ರಿಂದ 2025ರ ಏಪ್ರಿಲ್ 19ರವರೆಗೆ 23ಲಕ್ಷ 53ಸಾವಿರ 550ರೂಪಾಯಿ ಹಣ ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಇಷ್ಟೆಲ್ಲಾ ಹಣ ಪಡೆದರೂ ರಾಜಸ್ಥಾನ ತಂಡವಾಗಲಿ ಇಂಡಿಯನ್ ಪ್ರೀಮಿಯರ್ ತಂಡಕ್ಕೂ ಆತ ಸೇರ್ಪಡೆಯಾಗಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ್, ವಂಚಕರ ಜಾಲಕ್ಕೆ  ಮುಗ್ಧ ಯುವಕರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಮೋಸಕ್ಕೆ ಬಲಿಯಾದ ರಾಕೇಶನ ತಂದೆ ಕೆಎಸ್ ಆರ್ ಟಿಸಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತೀರಾ ಬಡತನವಿದ್ದರೂ ಮಗನಿಗೆ ಒಳ್ಳೆಯದು ಆಗುತ್ತೆ ಅಂತಾ ಹಣ ಹೊಂದಿಸಿ ಹಣ ತುಂಬಿದ್ದಾರೆ. 

ಆನ್ಲೈನ್ ನಲ್ಲಿ ಬರುವಂತಹ ಮೋಸದ ಸಂದೇಶಗಳ ಜಾಲಕ್ಕೆ ಯಾರು ಬಲಿಯಾಗಬಾರದು. ಸದ್ಯ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Related Articles

Back to top button