*ಗ್ಯಾರಂಟಿ ಯೋಜನೆಗಳು ವಾರೆಂಟಿ ಮುಗಿಸಿದ ಸ್ಕೀಮ್ ಗಳು: ಎಸ್‌ಡಿಪಿಐ ಆರೋಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನಸಾಮಾನ್ಯರಿಗೆ ಸುಲಭವಾಗಿ ಮತ್ತು ಗೌರವಯುತವಾಗಿ ತಲುಪಬೇಕಿದ್ದ ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು, ಅನಗತ್ಯ ದಾಖಲೆಗಳು ಮತ್ತು ಅವೈಜ್ಞಾನಿಕ ಆದಾಯ ಮಿತಿಗಳ ಹೆಸರಿನಲ್ಲಿ ಸರ್ಕಾರಗಳು ಜನಸಾಮಾನ್ಯರ ಪಾಲಿಗೆ ದುಸ್ತರವಾಗಿಸುತ್ತಿವೆ. ವಾರೆಂಟಿ ಇಲ್ಲದ ಗ್ಯಾರಂಟಿ ಯೋಜನೆಗಳು ಬಡವರು, ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ನಿರ್ಗತಿಕರನ್ನು ಕಲ್ಯಾಣ ಯೋಜನೆಗಳಿಂದ ಪರೋಕ್ಷವಾಗಿ ಹೊರಗಿಡುವ ಪ್ರಯತ್ನವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಳಗಾವಿ ಜಿಲ್ಲಾಧ್ಯಕ್ಷ ಮೊಅಜ್ಜಮಜಾ ಮುಲ್ಲಾನಿ ಆರೋಪಿಸಿದರು.
ಎಸ್‌ಡಿಪಿಐ ವತಿಯಿಂದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಆರಂಭದಲ್ಲಿ ಜನರಲ್ಲಿ ಆಶಾಭಾವನೆ ಮೂಡಿಸಿದ್ದರೂ, ಇಂದು ಅವುಗಳ ಅನುಷ್ಠಾನದಲ್ಲಿ ಆಡಳಿತಾತ್ಮಕ ವೈಫಲ್ಯ ಮತ್ತು ಅನಗತ್ಯ ನಿರ್ಬಂಧಗಳು ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಹೇಳಿದರು.
ಗೃಹ ಜ್ಯೋತಿ ಯೋಜನೆ ಪಡೆಯುತ್ತಿರುವ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿರುವುದು ಅನಗತ್ಯ ಕಿರುಕುಳವಾಗಿದೆ. ಈಗಾಗಲೇ ಸರ್ಕಾರದ ದಾಖಲೆಗಳಲ್ಲಿ ಅರ್ಹರೆಂದು ಗುರುತಿಸಲ್ಪಟ್ಟಿರುವ ಫಲಾನುಭವಿಗಳನ್ನು ಪುನಃ ದಾಖಲೆಗಳಿಗಾಗಿ ಅಲೆದಾಡಿಸುವುದು ಜನವಿರೋಧಿ ಕ್ರಮವಾಗಿದೆ.
ಇದರಿಂದ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದೇ ಸರ್ಕಾರದ ಗುಪ್ತ ಉದ್ದೇಶ ಎಂಬ ಅನುಮಾನ ಮೂಡುತ್ತಿದೆ.
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ನಿಯಮಿತವಾಗಿ ಹಣ ಜಮೆಯಾಗುತ್ತಿಲ್ಲ. ಹಲವು ತಿಂಗಳ ಬಾಕಿಯನ್ನು ಒಮ್ಮೆಲೇ ಜಮೆ ಮಾಡುವುದು, ಯಾವ ತಿಂಗಳ ಹಣ ಯಾವಾಗ ಬರುತ್ತದೆ ಎಂಬ ಗೊಂದಲ ಸೃಷ್ಟಿಯಾಗಿರುವುದು ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗಿದೆ ಎಂದು ಸರ್ಕಾರ ಪ್ರಚಾರ ಮಾಡುತ್ತಿದೆಯಾದರೂ, ಅದಕ್ಕೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಪರಿಣಾಮ ಮಹಿಳೆಯರು ಪ್ರತಿದಿನ ತುಂಬಿ ತುಳುಕುವ ಬಸ್‌ಗಳಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ರೀತಿ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಹೊಸದಾಗಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿರುವುದು ಸಾವಿರಾರು ಬಡ ಕುಟುಂಬಗಳಲ್ಲಿ ಆತಂಕ ಉಂಟುಮಾಡಿದೆ. ವಿಶೇಷವಾಗಿ ಕುಟುಂಬದ ವಾರ್ಷಿಕ ಆದಾಯ ₹32,000 ಮೀರಬಾರದು ಎಂಬ ಷರತ್ತು ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸಂಪೂರ್ಣ ಅವೈಜ್ಞಾನಿಕ, ಅಮಾನವೀಯ ಹಾಗೂ ಅಸಂಗತವಾಗಿದೆ.
ಒಂದೆಡೆ ರಾಜ್ಯ ಸರ್ಕಾರವೇ ಬಿಪಿಎಲ್ ಕಾರ್ಡ್‌ಗೆ ವಾರ್ಷಿಕ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿರುವಾಗ, ಮತ್ತೊಂದೆಡೆ ವಯೋವೃದ್ಧರು, ವಿಧವೆಯರು, ಅಂಗವಿಕಲರು ಮತ್ತು ನಿರ್ಗತಿಕರ ಪಿಂಚಣಿಗೆ ಇನ್ನೂ ₹32,000 ಆದಾಯ ಮಿತಿಯನ್ನು ಮುಂದುವರಿಸುತ್ತಿರುವುದು ಯಾವ ನ್ಯಾಯ ಎಂದು ಮೊಅಜ್ಜಮಜಾ ಮುಲ್ಲಾನಿ ಪ್ರಶ್ನಿಸಿದರು.
ಕೇರಳದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗೆ ವಾರ್ಷಿಕ ಕುಟುಂಬ ಆದಾಯ ಮಿತಿ ₹1 ಲಕ್ಷವಿದ್ದು, ತೆಲಂಗಾಣದಲ್ಲಿ ಗ್ರಾಮೀಣ ಪ್ರದೇಶಗಳಿಗೆ ₹2 ಲಕ್ಷ ಹಾಗೂ ನಗರ ಪ್ರದೇಶಗಳಿಗೆ ₹3 ಲಕ್ಷ ಆದಾಯ ಮಿತಿಯನ್ನು ಅನುಸರಿಸಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗೆ ಪ್ರತ್ಯೇಕ ಅತಿ ಕಡಿಮೆ ಆದಾಯ ಮಿತಿಯನ್ನು ವಿಧಿಸುವ ಬದಲು ಬಿಪಿಎಲ್ ಕಾರ್ಡ್ ಅಥವಾ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಾನದಂಡವನ್ನು ಅನುಸರಿಸಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ₹32,000 ಎಂಬ ಕಾಲಹರಣಗೊಂಡ ಆದಾಯ ಮಿತಿಯನ್ನು ಮುಂದುವರಿಸಿ ಸಾವಿರಾರು ಅರ್ಹ ಫಲಾನುಭವಿಗಳನ್ನು ಯೋಜನೆಗಳಿಂದ ವಂಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ಆಗ್ರಹ
ಸಾಮಾಜಿಕ ಭದ್ರತಾ ಪಿಂಚಣಿಗೆ ವಿಧಿಸಿರುವ ₹32,000 ವಾರ್ಷಿಕ ಆದಾಯ ಮಿತಿಯನ್ನು ತಕ್ಷಣ ರದ್ದುಪಡಿಸಿ, ಇಂದಿನ ಜೀವನ ವೆಚ್ಚ ಮತ್ತು ಇತರ ರಾಜ್ಯಗಳ ಮಾನದಂಡಗಳಿಗೆ ಅನುಗುಣವಾಗಿ ಪರಿಷ್ಕರಿಸಬೇಕು. ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಅನಗತ್ಯ ದಾಖಲೆಗಳ ಬೇಡಿಕೆ ಇಲ್ಲದೆ ಪಿಂಚಣಿ ಮತ್ತು ಇತರೆ ಕಲ್ಯಾಣ ಯೋಜನೆಗಳನ್ನು ಮುಂದುವರಿಸಬೇಕು.
ಗೃಹ ಜ್ಯೋತಿ ಯೋಜನೆಯ ಮರುದಾಖಲೀಕರಣ ಪ್ರಕ್ರಿಯೆಯನ್ನು ಕೈಬಿಟ್ಟು, ಈಗಾಗಲೇ ಅರ್ಹರಾಗಿರುವ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಿ, ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಹಣ ಜಮೆಯಾಗುವ ವ್ಯವಸ್ಥೆ ಮಾಡಬೇಕು.
ಶಕ್ತಿ ಯೋಜನೆ ಪರಿಣಾಮಕಾರಿಯಾಗಲು ರಾಜ್ಯದಾದ್ಯಂತ ಅಗತ್ಯ ಸಂಖ್ಯೆಯ ಹೊಸ ಬಸ್‌ಗಳನ್ನು ರಸ್ತೆಗಿಳಿಸಬೇಕು.
ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ಇತರ ದುರ್ಬಲ ವರ್ಗಗಳ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಯಾವುದೇ ನೆಪದಲ್ಲಿ ಸ್ಥಗಿತಗೊಳಿಸದೆ ನಿರಂತರವಾಗಿ ವಿತರಿಸಬೇಕು.
ಬಡವರ ಪರ ಎಂದು ಹೇಳಿಕೊಳ್ಳುವ ಸರ್ಕಾರಗಳು ಭಾಷಣಗಳಲ್ಲಿ ಮಾತ್ರ ಬಡವರ ಬಗ್ಗೆ ಮಾತನಾಡದೆ, ಕಲ್ಯಾಣ ಯೋಜನೆಗಳನ್ನು ಸರಳ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ಜಾರಿಗೊಳಿಸಬೇಕು. ದಾಖಲೆಗಳ ನೆಪದಲ್ಲಿ ಬಡವರನ್ನು ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿಸಿ, ಅವರ ಹಕ್ಕಿನ ಯೋಜನೆಗಳಿಂದ ವಂಚಿಸುವ ಯಾವುದೇ ಪ್ರಯತ್ನವನ್ನು ಎಸ್‌ಡಿಪಿಐ ತೀವ್ರವಾಗಿ ವಿರೋಧಿಸುತ್ತದೆ ಎಂದು ಮೊಅಜ್ಜಮಜಾ ಮುಲ್ಲಾನಿ ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಖಾದ್ರಿ ಕಾರ್ಯದರ್ಶಿಗಳಾದ ಮುಜಫರ್ ಬಾಗವಾನ ಹಾಗೂ ಮಾಜೀದ ಶೇಖ ಜಿಲ್ಲಾ ಸಮಿತಿ ಸದಸ್ಯರು ಮಲಿಕಜಾನ ಮುಲ್ಲಾ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಲ್ತಾಫ್ ಮುಜಾವರ ಇದ್ದರು.




