Kannada NewsKarnataka NewsLatest

ಭೂ-ರಹಿತರ ಹೋರಾಟಕ್ಕೆ ಶಾಸಕಿ ಅಂಜಲಿ ನಿಂಬಾಳಕರ್ ಬೆಂಬಲ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ತಾಲೂಕಿನಲ್ಲಿ  “ಭೂಮಿಗಾಗಿ ಬಹುಜನರ ಹೋರಾಟ ಸಮಿತಿ” ವತಿಯಿಂದ ಬೀಡಿ, ಹುಲಿಕೊತ್ತಲ, ಕರಿಕಟ್ಟಿ ಮುಂತಾದ ಗ್ರಾಮಗಳ ಜನರು ಖಾನಾಪುರ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದೆ.
ತಲೆಮಾರುಗಳಿಂದ ನಮ್ಮ ಕುಟುಂಬಗಳು ವ್ಯವಸಾಯಕ್ಕೆ ಸ್ವಂತ ಭೂಮಿಯಿಲ್ಲದೆ ಶ್ರೀಮಂತರ ಭೂಮಿಗಳಲ್ಲಿ ಕೂಲಿಗಾಗಿ ದುಡಿಯುತ್ತಿದ್ದೇವೆ. ತಾಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಯನ್ನು ಭೂರಹಿತ ಪ್ರತಿ ಕುಟುಂಬಕ್ಕೆ ತಲಾ ಎರಡು ಎಕರೆಯಂತೆ ಹಂಚಿಕೆ ಮಾಡಬೇಕು ಹಾಗೂ ತಾಲೂಕಿನಾದ್ಯಂತ ವಿವಿಧ ಗ್ರಾಮಮಗಳಲ್ಲಿ ವಿಶೇಷವಾಗಿ ಬೀಡಿ ಗ್ರಾಮದಲ್ಲಿ ನೂರಾರು ಕುಟುಂಬಗಳು ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ಕಳೆದ ನಾಲ್ಕೈದು ದಶಕಗಳಿಂದ ವಾಸಿಸುತ್ತಿದ್ದು, ಈ ಪೈಕಿ ಗಾಯರಾಣಾ/ಗೋಮಾಳ ದಲ್ಲಿ ವಾಸಿಸುತ್ತಿರುವವರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ.
ಇದರಿಂದ ತಮ್ಮ ಮಕ್ಕಳ ಮದುವೆ, ಅನಾರೋಗ್ಯ ಮುಂತಾದ ಸಂಕಷ್ಠದಲ್ಲಿ ಬ್ಯಾಂಕಿನಲ್ಲಿ ಅಡವಿಟ್ಟು ಸಾಲಪಡೆಯಲು ಸಹಿತ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾವು ವಾಸಿಸುತ್ತಿರುವ ನಿವೇಶನದ ಹಕ್ಕು ಪತ್ರವನ್ನು ನೀಡಬೇಕೆಂದು ತಹಶೀಲ್ದಾರರ ಮುಖಾಂತರ ಸರ್ಕಾರವನ್ನು ಆಗ್ರಹಿಸಿದರು.
ಈ ಜನರ ಹೋರಾಟದಲ್ಲಿ ತಮ್ಮ ಅನಾರೋಗ್ಯದ ನಡುವೆಯೂ ಭಾಗವಹಿಸಿದ ಖಾನಾಪುರ ಕ್ಷೇತ್ರದ ಶಾಸಕಿ ಡಾ. ಅಂಜಲಿ ಹೇಮಂತ್ ನಿಂಬಾಳಕರ್, ಸ್ವಂತ ನಿವೇಶನವಿಲ್ಲದೆ ಗಾಯರಾಣ/ಗೋಮಾಳದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಸದರಿ ನಿವೇಶನದ ಹಕ್ಕುಪತ್ರ ನೀಡಲು ಸದ್ಯದ ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ಸದರಿ ನಿಯಮಾವಳಿಯಲ್ಲಿ ಸೂಕ್ತ ಬದಲಾವಣೆ ಮಾಡಲು ಹಾಗೂ ಲಭ್ಯವಿರುವ ಸರ್ಕಾರಿ ಜಮೀನನ್ನು ಭೂ-ರಹಿತ ಬಡಕುಟುಂಬಗಳಿಗೆ ತ್ವರಿತವಾಗಿ ಹಂಚಿಕೆಮಾಡಲು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದರು.
ನಿಮ್ಮ ಹೋರಾಟ ವ್ಯವಸ್ಥಿತವಾಗಿರಲಿ, ದಿನಕ್ಕೊಬ್ಬರು ನೇತೃತ್ವ ವಹಿಸಿ ಹೋರಾಟದ ದಾರಿ ತಪ್ಪಿಸುವುದುಬೇಡ.  “ಭೂಮಿಗಾಗಿ ಬಹುಜನರ ಹೋರಾಟ ಸಮಿತಿ” ಯನ್ನು ವ್ಯವಸ್ಥಿತವಾಗಿ ರಚಿಸಿಕೊಳ್ಳುವ ಮೂಲಕ ಸದರ ಸಮಿತಿಯ ಪದಾಧಿಕಾರಿಗಳು ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button