*ಮದುವೆಯಾಗುವುದಾಗಿ ನಂಬಿಸಿ ಮೋಸ: ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ*

ಪ್ರಗತಿವಾಹಿನಿ ಸುದ್ದಿ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಯುವಕ ಕೈಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೀರಿನ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ರಾವ್ (21) ಯುವತಿಯನ್ನು ನಂಬಿಸಿ ಮೋಸ ಮಾಡಿರುವ ಆರೋಪಿ. ಯುವಕ ಹಾಗೂ ಸಂತ್ರಸ್ತ ಯುವತಿ ಪ್ರೌಢಶಾಲೆಯಿಂದ ಸಹಪಾಠಿಗಳಾಗಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ಸದ್ಯ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ಯುವತಿಯನ್ನು ಮನೆಗೆ ಕರೆದು ಮದುವೆಯಾಗುವುದಾಗಿ ಆರೋಪಿ ನಂಬಿಸಿದ್ದ ಎನ್ನಲಾಗಿದೆ.
2024ರ ಅಕ್ಟೋರ್ 11ರಂದು ಆರೋಪಿ ಶ್ರೀಕೃಷ್ಣರಾವ್ ಮನೆಗೆ ಕರೆಸಿ ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಬಳಿಕ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ. 2025ರ ಜನವರಿ ತಿಂಗಳಲ್ಲಿಯೂ ಮತ್ತೆ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದು, ಇದೀಗ ತಾನು ಗರ್ಭವತಿಯಾಗಿದ್ದು, ಈಗ ಆರೋಪಿ ಮದುವೆಗೆ ನಿರಾಕರಿಸುತ್ತಿದ್ದಾನೆ. ಪ್ರೀತಿಸಿ, ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಯುವತಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ 64 (1), 69 ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿ ಯುವಕ ಬಿಜೆಪಿ ಮುಖಂಡನ ಪುತ್ರ ಎನ್ನಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಯುವಕ ನಾಪತ್ತೆಯಾಗಿದ್ದಾನೆ. ಆರೋಪಿ ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.