
ಕರ್ನಾಟಕದ ಹೃದಯ ಬೆಂಗಳೂರು ಎಲ್ಲರಿಗೂ ಸೇರಿದ್ದು: ಡಿಸಿಎಂ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ: “ಕರ್ನಾಟಕದ ಎಲ್ಲಾ ಭಾಗಗಳ ಜನರ ಹೃದಯವೇ ಬೆಂಗಳೂರು. ಬೆಂಗಳೂರು ನಗರ ಇಲ್ಲಿನ ಸುತ್ತಮುತ್ತಲ ಜನರಿಗೆ ಸೇರಿದ್ದಲ್ಲ, ದಕ್ಷಿಣ ಕನ್ನಡ, ಗುಲ್ಬರ್ಗ, ರಾಯಚೂರು, ಉಡುಪಿ ಹೀಗೆ ಎಲ್ಲರಿಗೂ ಸೇರಿದ್ದು. ನೀವೆಲ್ಲರೂ ಸೇರಿ ಬೆಂಗಳೂರನ್ನು ಉಳಿಸಿ ಬೆಳೆಸಬೇಕು” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಗರದ ನಂದಿ ಲಿಂಕ್ ಗ್ರೌಂಡ್ ನಲ್ಲಿ ಭಾನುವಾರ ನಡೆದ ಕುಂದಾಪ್ರ ಕನ್ನಡ ಹಬ್ಬ- 2025ರಲ್ಲಿ ಭಾಗವಹಿಸಿ ಮಾತನಾಡಿದರು.
“ಕರಾವಳಿ ಭಾಗದವರೇ ಹೆಚ್ಚಿನ ವಿದ್ಯಾಸಂಸ್ಥೆಗಳು, ಹೋಟೆಲ್, ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಿರುವುದು. ಈ ಭಾಗ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಈ ಕಾರಣಕ್ಕೆ ಈಗಾಗಲೇ ಸದನದಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನ ಮಾಡುವುದಾಗಿ ಘೋಷಣೆ ಮಾಡಲಾಗಿದೆ” ಎಂದರು.
“ನಿಮ್ಮ ಭಾಗಕ್ಕೆ ವಿಮಾನ ನಿಲ್ದಾಣದ ಬಗ್ಗೆ ಆನಂತರ ಚರ್ಚೆ ಮಾಡೋಣ. ನೀವು ಹೊರಗೆ ವಲಸೆ ಹೋಗುವುದನ್ನು ತಪ್ಪಿಸಿ ನೀವಿದ್ದಲಿಯೇ ಉದ್ಯೋಗ ಸೃಷ್ಟಿ ಮಾಡುವುದು ಮೊದಲ ಆದ್ಯತೆ. ನಿಮ್ಮ ಊರಿನಲ್ಲಿಯೇ ನಿಮ್ಮ ಪರಂಪರೆಯನ್ನು ಜಗತ್ತಿಗೆ ಪರಿಚಯ ಮಾಡಬೇಕು. ಈ ಡಿ.ಕೆ.ಶಿವಕುಮಾರ್ ಉಡುಪಿ ಹಾಗೂ ಕುಂದಾಪುರದ ಜನತೆಯ ಜೊತೆಯಲ್ಲಿ ಸದಾ ಇರುತ್ತಾನೆ ಎನ್ನುವ ಸಂದೇಶ ನೀಡುತ್ತೇನೆ. ನಿಮ್ಮ ಆಶೀರ್ವಾದ ಇದ್ದರೆ ನಮ್ಮ ಸಹಕಾರ ಇರುತ್ತದೆ” ಎಂದು ಹೇಳಿದರು.
“ಗ್ರೇಟರ್ ಬೆಂಗಳೂರು ಮಾಡುವುದರಿಂದ ಕನ್ನಡಿಗರಿಗೆ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಟೀಕೆ ಮಾಡಿದರು. ನಾನು ಅವರಿಗೆ ಹೇಳಿದೆ, ನೀವೆಲ್ಲರೂ ಮೂರ್ಖರು ಬೆಂಗಳೂರು ಕರ್ನಾಟಕದ ಎಲ್ಲಾ ಜನತೆಯ ಹೃದಯ ಭಾಗ ಇದ್ದಂತೆ. ಇಲ್ಲಿರುವ ಹೊರಗಿನವರಿಗೆ ನೀವು ಪರಕೀಯರು ಎನ್ನುವ ಭಾವನೆ ಬೇಡ” ಎಂದರು.

“ಈ ಊರಿಗೆ ಜಡ್ಜ್, ಲಾಯರ್, ಉದ್ಯಮಿ – ಹೀಗೆ ಯಾರೇ ಬಂದರೂ ಹೊರಗೆ ಹೋಗುವುದಿಲ್ಲ. ಈ ಹಿಂದೆ ಅನುಕೂಲಸ್ಥರು ಮುಂಬೈ, ಸೌದಿಗೆ ತೆರಳಿದ್ದಾರೆ. ಈಗಿನ ಯುವ ಜನತೆ ಬೆಂಗಳೂರಿಗೆ ಬರುತ್ತಿದ್ದಾರೆ” ಎಂದರು.
“ಮೂಲವನ್ನು ಮರೆತರೆ ಫಲವನ್ನು ಮರೆತಂತೆ ಎಂದು ಹಿರಿಯರು ಹೇಳಿದ್ದಾರೆ. ದೇವರು ವರ ಮತ್ತು ಶಾಪ ಎರಡನ್ನೂ ನೀಡುವುದಿಲ್ಲ ಆದರೆ ಅವಕಾಶವನ್ನು ಮಾತ್ರ ನೀಡುತ್ತಾನೆ. ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಕುಂದಾಪುರ ಕನ್ನಡಿಗರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದೇ ಕರ್ನಾಟಕದ ಸೌಭಾಗ್ಯ. ನಿಮ್ಮ ಸಂಘದ ಹಿರಿಯರು ಎಲ್ಲರನ್ನು ಒಟ್ಟಿಗೆ ಸೇರಿಸಿ ಕರ್ನಾಟಕದ ಹೃದಯ ಭಾಗದಲ್ಲಿ ನೀವು ಇದ್ದೀರಾ ಎಂದು ಸಂದೇಶ ನೀಡಿದ್ದೀರಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು” ಎಂದು ಶ್ಲಾಘಿಸಿದರು.
“ನಿಮಗೆ ಪಾರಂಪರಿಕವಾಗಿ ಕಲೆ ಮೈಗೂಡಿಕೊಂಡು ಬಂದಿದೆ. ಈ ಮೊದಲು ಕೇವಲ ಮಂಗಳೂರು ಎಂದು ಹೇಳುತ್ತಿದ್ದರು. ಆದರೆ ಇಡೀ ಕರಾವಳಿಗೆ ಪ್ರಾಮುಖ್ಯತೆಯಿದೆ. ಉಡುಪಿಯ ಪಂಚಾಯ್ತಿಯೊಂದರಲ್ಲಿಯೇ ಮೂರು ಮೆಡಿಕಲ್ ಕಾಲೇಜಿದೆ. ಇದು ನಿಮ್ಮ ಹೆಗ್ಗಳಿಕೆ” ಎಂದರು.
“ಮೈಸೂರು ದಸರಾದಲ್ಲಿ ಕಂಬಳ ಮಾಡುವ ಆಲೋಚನೆಯಿತ್ತು. ಅದಕ್ಕೆ ಮುಖ್ಯಮಂತ್ರಿಗಳು ಆ ಗಡಿಬಿಡಿಯಲ್ಲಿ ಮಾಡುವುದು ಬೇಡ ಮಧ್ಯದಲ್ಲಿ ಯಾವಾಗಾದರೂ ಮಾಡೋಣ ಎಂದಿದ್ದಾರೆ. ನಿಮ್ಮ ಕಲೆಯಾದ ಯಕ್ಷಗಾನ ಸೇರಿದಂತೆ ನಾಟಕ, ಸಾಹಿತ್ಯ ಯಾವುದೂ ಸಹ ಅಳಿಸಿ ಹೋಗಬಾರದು ಎಂಬುದು ನಮ್ಮ ಕಾಳಜಿ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆದಷ್ಟು ಬೇಗ ಮಾಡಲಾಗುವುದು. ಸಂಘದವರು ಮತ್ತೊಮ್ಮೆ ನನ್ನ ಭೇಟಿ ಮಾಡಿ” ಎಂದರು.