*ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಪ್ರಭಾಕರ ನಾಗರಮುನ್ನೋಳಿ ಆಯ್ಕೆ* *ಸ್ವಪ್ನಿಲ್ ಶಹಾ ಮತ್ತು ಉದಯ ಜೋಶಿ ಉಪಾಧ್ಯಕ್ಷರು, ಸತೀಶ್ ಕುಲಕರ್ಣಿ ಕಾರ್ಯದರ್ಶಿ, ಸಂಜಯ ಪೋತದಾರ ಖಜಾಂಚಿ, ಮನೋಜ ಮತ್ತಿಕೊಪ್ ಸಹ ಕಾರ್ಯದರ್ಶಿ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ವಾಣಿಜ್ಯೋದ್ಯಮ ಸಂಘ(ಚೆಂಬರ್ ಆಫ್ ಕಾಮರ್ಸ್)ಕ್ಕೆ 2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಭಾಕರ ನಾಗರಮುನ್ನೋಳಿ ಅಧ್ಯಕ್ಷರಾಗಿ, ಸತೀಶ್ ಕುಲಕರ್ಣಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಸಂಜೆ ನಡೆದ ನೂತನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸ್ವಪ್ನಿಲ್ ಶಹಾ ಮತ್ತು ಉದಯ ಜೋಶಿ ಉಪಾಧ್ಯಕ್ಷರಾಗಿ, ಸಂಜಯ ಪೋತದಾರ ಖಜಾಂಚಿಯಾಗಿ, ಮನೋಜ ಮತ್ತಿಕೊಪ್ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ನಿಕಟಪೂರ್ವ ಪದಾಧಿಕಾರಿಗಳಾದ ಅಧ್ಯಕ್ಷ ಸಂಜೀವ ಕತ್ತಿ ಶೆಟ್ಟಿ, ಕಾರ್ಯದರ್ಶಿ ರಾಜೇಂದ್ರ ಮುತಗೇಕರ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳು ಎಲ್ಲರ ಸಹಕಾರ ಕೋರಿದರು.
ಇದಕ್ಕೂ ಮೊದಲು ನಡೆದ 2024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ, ನೂತನ ಆಡಳಿತ ಮಂಡಳಿಗೆ ಆಯ್ಕೆಯಾದ ಸಚಿನ್ ಸಬ್ನಿಸ್, ಎಂ.ಕೆ.ಹೆಗಡೆ, ಅಪ್ಪಾಸಾಹೇಬ ಗುರವ್, ರೋಹಿತ್ ಕಪಾಡಿಯಾ, ಸಚಿನ್ ಹಂಗಿರಗೇಕರ್, ವಿಜಯ ದರಗಶೆಟ್ಟಿ, ದಯಾನಂದ ನೇತಲಕರ್, ವಿನಿತ್ ಹರಕುಣಿ, ಸುಧೀರ್ ಚೌಗಲೆ, ಬಸವರಾಜ ರಾಮಪುರೆ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಸಂಜೀವ ಕತ್ತಿಶೆಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಾಜೇಂದ್ರ ಮುತಗೇಕರ್ 2024-25ನೇ ಸಾಲಿನ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಖಜಾಂಚಿ ಮನೋಜ ಮತ್ತಿಕೊಪ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಸ್ವಪ್ನಿಲ್ ಶಹಾ ಮತ್ತು ಉದಯ ಜೋಶಿ ವೇದಿಕೆಯಲ್ಲಿದ್ದರು. ನ್ಯೂಸ್ ಲೆಟರ್ ಸಂಪಾದಕ ವಿಕ್ರಮ್ ಜೈನ್ ನ್ಯೂಸ್ ಲೆಟರ್ ಲೆಕ್ಕಪತ್ರದ ವಿವರ ನೀಡಿದರು. ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಪ್ರವೀಣ ರಂಗೋಲೆ ಮತ್ತು ಪ್ರವೀಣ ಪರಮಶೆಟ್ಟಿ ಅವರನ್ನು ಸತ್ಕರಿಸಲಾಯಿತು.