*ಇಲಿ, ಹೆಗ್ಗಣಗಳಿಗೆ ಮನೆಯಾದ ಬಿ.ಎಸ್.ಎನ್.ಎಲ್ ಕೇಬಲ್ ಬಂಡಲ್ ಗಳು: ಈ ತಾಲೂಕಿಗೆ ಮರೀಚಿಕೆಯಾದ ಸೌಲಭ್ಯ*

ಪ್ರಗತಿವಾಹಿನಿ ಸುದ್ದಿ: ಜಗತ್ತು 21ನೇ ಶತಮಾನದಲ್ಲಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಎಐ ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿದೆ. ಯಾವುದೇ ಕೆಲಸವಾದರೂ ಈಗ ಮೊಬೈಲ್, ಆನ್ ಲೈನ್ ಮೂಲಕವೇ ಆಗಬೇಕು. ಆಗುತ್ತಿದೆ ಕೂಡ. ಇಂಟರ್ ನೆಟ್, ತಂತ್ರಜ್ಞಾನದ ಬೆಳವಣಿಗೆ, ಆಧುನಿಕ ಸೌಲಭ್ಯ ಮೊದಲಾದವುಗಳ ಬಗ್ಗೆ, ಸರ್ಕಾರ, ರಾಜಕಾರಣಿಗಳು ಎಷ್ಟೇ ಭಾಷಣಗಳನ್ನು ಬಿಗಿದರೂ, ಯೋಜನೆಗಳ ಬಗ್ಗೆ ಎಷ್ಟೇ ಪ್ರಗತಿ ಪರಿಶೀಲನೆಗಳ ಸಭೆ ನಡೆಸಿದರೂ ಅದೇಷ್ಟೋ ತಾಲೂಕು, ಗ್ರಾಮಗಳಿಗೆ ಯಾವುದೇ ಸೌಕರ್ಯಗಳೂ ಇಲ್ಲದಿರುವ ಹಳ್ಳಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟಿವೆ. ಇಲ್ಲಿರುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾತ್ರ ಈ ತಾಲೂಕುಗಳ್ ಗ್ರಾಮಗಳು ಕಣ್ಣಿಗೆ ಕಾಣುತ್ತಿಲ್ಲ, ಜನರ ಸಂಕಷ್ಟದ ಕೂಗು ಕೇಳುತ್ತಿಲ್ಲ. ಕಾರಣ ಅಧಿಕಾರಿಗಳು, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ. ಅಂಥದ್ದೇ ದುರಾವಸ್ಥೆಯಲ್ಲಿರುವ ತಾಲೂಕು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿನ ಜೋಯಿಡಾ ತಾಲೂಕಿನ ಸ್ಥಿತಿ, ಇಲ್ಲಿನ ಜನರ ಸಂಕಷ್ಟ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಈ ತಾಲೂಕಿನ ಅಭಿವೃದ್ಧಿಯಾಗಲಿ, ಜನರಿಗೆ ಅನುಕೂಲ ಕಲ್ಪಿಸಿಕೊಡುವುದಾಗಲಿ ಯಾವುದೇ ಅಧಿಕಾರಿಗಳಿಗೂ ಬೇಡ. ಯಾವುದೇ ತಂತ್ರಜ್ಞಾನವಾಗಲಿ, ತಾಂತ್ರಿಕ ಶಿಕ್ಷಣವನ್ನು ಒದಗಿಸುವುದಾಗಲಿ ಯಾರಿಗೂ ಬೇಡ. ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕೆಲಸಗಳನ್ನು ದಾಂಡೇಲಿಯಲ್ಲಿಯೋ ಹಳಿಯಾಳದಲ್ಲಿಯೋ ಮಾಡಿಕೊಂಡು, ನೆಪ ಮಾತ್ರಕ್ಕೆ ಕಚೇರಿಗೆ ಬರುತ್ತಾರೆ. ಕಛೇರಿಗಳಲ್ಲಿ ಸರ್ವರ್ ಸರಿ ಇಲ್ಲ, ನೆಟ್ವರ್ಕ್ ಇಲ್ಲ, ಕರೆಂಟ್ ಇಲ್ಲ, ಎನ್ನುವುದು ಬಿಟ್ಟು ಬೇರೇನಿಲ್ಲ.
ಯಾವುದೇ ಜನಪ್ರತಿನಿದಿಗಳಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ… ಯಾಕೆ ಎಂದು ಯಾರೂ ಕೇಳುತ್ತಿಲ್ಲ. ಕಳೆದ ವರ್ಷ ತಾಲೂಕಿಗೆ ಹಳ್ಳಿ ಹಳ್ಳಿಗಳಿಗೂ ನಗರ ಪ್ರದೇಶಗಳಿಗೂ ಸಂಪರ್ಕಕ್ಕೆ ಅನುಕೂಲವಾಗಲಿ ಎಂದು ಕೇಂದ್ರ ಸರಕಾರ 47 ಬಿ.ಎಸ್.ಎನ್. ಎಲ್ ಟವರ್ ಗಳನ್ನು ತಾಲೂಕಿಗೆ ನೀಡಿತ್ತು. ಆದರೆ ಇದುವರೆಗೂ ಒಂದೇ ಒಂದು ಟವರ್ ನಿರ್ಮಾಣವಾಗಿಲ್ಲ. ಕೆಲಸದ ಪ್ರಗತಿಯೂ ಇಲ್ಲ ಈ ಬಗ್ಗೆ ಯಾರೂ ಮಾಹಿತಿಯನ್ನು ಜನತೆಗೆ ಹೇಳುವ ಅಧಿಕಾರಿಗಳೂ ಇಲ್ಲ. ಹಾಗಾಗಿ ತಾಲೂಕಿನ ಬಡ ಜನತೆ ರೇಷನ್ ಪಡೆಯುವಾಗ ಎಲ್ಲೊ ಹೋಗಿ ಹೆಬ್ಬೆರಳು ಒತ್ತಿ ಇನ್ನೆಲ್ಲೋ ಹೋಗಿ ಆಹಾರ ಧಾನ್ಯ ಪಡೆಯುತ್ತಿದ್ದಾರೆ.
ತಾಲೂಕಿನಲ್ಲಿ ಸರಿಯಾದ ಯಾವ ನೆಟ್ವರ್ಕ್ ಗಳೂ ಇಲ್ಲದೇ ಜನ ರೋಸಿಹೋಗಿದ್ದಾರೆ. ಕಳೆದ ಒಂದು ವರ್ಷದಿಂದ ಜೋಯಿಡಾ ಬಿ.ಎಸ್.ಎನ್.ಎಲ್ ಕಚೇರಿಯ ಸುತ್ತಲೂ ತಂದು ಒಗೆದ 47 ಟವರ್ ಗಳ ಕೇಬಲ್ ಬಂಡಲ್ ಗಳು ಇಲಿ, ಹೆಗ್ಗಣಗಳಿಗೆ ಮನೆಯಾಗಿವೆ. ಕೇಂದ್ರ ಸರಕಾರದ ಯೋಜನೆ ಎಂಬ ಅಭಿಮಾನದಿಂದಲಾದರೂ ಬಿಜೆಪಿಯ ಜನರು ವಿಚಾರಿಸಿ ಸಂಸದರಿಗೆ ಮಾಹಿತಿ ಕೊಟ್ಟು ತಾಲೂಕಿನ ಅಭಿವೃದ್ಫಿಗೆ ಶ್ರಮಿಸಬೇಕಾಗಿತ್ತು, ಅದನ್ನೂ ಮಾಡಿಲ್ಲ. ಯಾರಿಗೆ ಹೇಳೋಣ ನಮ್ಮ ಗೋಳು ಎಂದು ತಾಲೂಕಿನ ಗ್ರಾಮೀಣ ಜನ ನೆಟ್ವರ್ಕ್ ಇಲ್ಲದ ಮೊಬೈಲ್ ಹಿಡಿದು ಓಡಾಡುತ್ತಿದ್ದಾರೆ.