
ಪ್ರಗತಿವಾಹಿನಿ ಸುದ್ದಿ: ಭಾರತದ 29 ವರ್ಷದ ಟೆಕ್ಕಿಯನ್ನು ಅಮೆರಿಕದಲ್ಲಿ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ
ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ವ್ಯಕ್ತಿ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ವೃತ್ತಿಪರರಾಗಿದ್ದ. ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಕೊಂದಿದ್ದಾರೆ ಎಂದು ಹೇಳಲಾಗಿದೆ.
ಏನಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕ್ಷುಲಕ ವಿಚಾರಕ್ಕೆ ರೂಮ್‌ಮೇಟ್‌ನೊಂದಿಗೆ ಜಗಳ ನಡೆದಿದೆ. ಗುರುವಾರ ಬೆಳಗ್ಗೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿಸಲಾಗಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಹಸ್ನುದ್ದೀನ್ ತಮ್ಮ ಮಗನ ಮೃತದೇಹವನ್ನು ಮಹಬೂಬ್‌ನಗರಕ್ಕೆ ತರಲು ನೆರವು ನೀಡುವಂತೆ ಕೋರಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಅಧಿಕಾರಿಗಳಿಂದ ತುರ್ತು ಸಹಾಯವನ್ನು ಕೋರಿದ್ದು, ಅಮೆರಿಕದ ಪೊಲೀಸರು ತನ್ನ ಮಗನನ್ನು ಯಾಕೆ ಗುಂಡಿಕ್ಕಿ ಕೊಂದಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ ಎಂದಿದ್ದಾರೆ.
ಮಜ್ಲಿಸ್ ಬಚಾವೋ ತಹ್ರೀಕ್ (ಎಂಬಿಟಿ) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಕುಟುಂಬದ ಮನವಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ. ನಿಜಾಮುದ್ದೀನ್ ಅಮೇರಿಕಾದಲ್ಲಿ ಸಾಫ್ಟ್‌ವೇರ್ ವೃತ್ತಿಪರರಾಗಿ ಕೆಲಸ ಮಾಡುವ ಮೊದಲು ಎಂಎಸ್ ಮುಗಿಸಿದ್ದರು ಎಂದು ಅವರ ತಂದೆ ಹೇಳಿದರು.