*ಸಮೀಕ್ಷೆ ಹೆಸರಲ್ಲಿ ಸಮಾಜಗಳಲ್ಲಿ ಸಂಘರ್ಷ ಸೃಷ್ಟಿಸಿ ದುರ್ಲಾಭ ಪಡೆಯುವ ಹುನ್ನಾರ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಸಮಾಜಗಳಲ್ಲಿ ಸಂಘರ್ಷ ಸೃಷ್ಟಿಸಿ ಅದರ ದುರ್ಲಾಭ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ, ಅದರ ಫಲವೇ ರಾಜ್ಯದಲ್ಲಿನ ಸಮಾಜಿಕ, ಶೈಕ್ಷಣಿಕ ಸಮೀಕ್ಷೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ನೆಪದಲ್ಲಿ ಹೊಸ ಜಾತಿ, ಉಪಜಾತಿಗಳ ಸೇರ್ಪಡೆ ಅಧಿಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಇದೆಯೇ ಅಧ್ಯಯನ ಇಲ್ಲದೆಯೇ ಹೇಗೆ ಹೊಸ ಜಾತಿ ಸೇರ್ಪಡೆ ಮಾಡುತ್ತಾರೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲಾಗದು. ಮೀಸಲಾತಿ ನೀಡುವ ಅಧಿಕಾರ ಸಿಎಂ ಸಿದ್ದರಾಮಯ್ಯ ಹೊಂದಿದ್ದಾರೆಯೇ. ಸಮೀಕ್ಷೆಯಲ್ಲಿ ಗೊಂದಲ ಸೃಷ್ಟಿಸಿದ್ದೇ ಸಿದ್ದರಾಮಯ್ಯ ಸರ್ಕಾರ. ಇದಕ್ಕಾಗಿಯೇ ಹೈಕೋರ್ಟ್ ಸಹ ಸಮೀಕ್ಷೆಯನ್ನು ಅಸಂವಿಧಾನಿಕ ಎಂಬರ್ಥದಲ್ಲಿ ಸಮೀಕ್ಷೆಯಲ್ಲಿ ಮಾಹಿತಿಗೆ ಯಾರಿಗೂ ಒತ್ತಡ ಮಾಡುವಂತಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದೆ ಎಂದರು.
ಸಮಾಜವಾದದ ಹಿನ್ನೆಲೆಯ, ಜಾತ್ಯತೀತ ಎಂದು ಬಿಂಬಿಸಿಕೊಳ್ಳುವ ಸಿಎಂರಿಂದಲೇ ಜಾತಿ ಪದ್ದತಿ ಸಂಕೀರ್ಣಗೊಳಿಸು ಅತ್ಯಂತ ಕೆಟ್ಟ ಪದ್ದತಿ ನಡೆಯುತ್ತಿದೆ. ವೀರಶೈವ ಲಿಂಗಾಯತ ಸಮಾಜವನ್ನು ಒಡೆದಾಳಬೇಕೆಂಬ ಬಯಕೆ ಸಿಎಂ ಅವರದ್ದಾಗಿದೆ. 2013 ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಸಮಾಜ ಒಡೆಯಲು ಯತ್ನಿಸಿ ಕೈ ಸುಟ್ಟುಕೊಂಡರೂ ಬುದ್ದಿ ಬಂದಂತಿಲ್ಲ. ಸಮೀಕ್ಷೆ ನೆಪದಲ್ಲಿ ಮತ್ತೆ ಅಂತಹದ್ದೇ ಯತ್ನಕ್ಕೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಜನೆವರಿಯಲ್ಲಿ ಸಮೀಕ್ಷೆ ಆರಂಭಿಸಲಿದ್ದು ರಾಜ್ಯ ಸರ್ಕಾರಕ್ಕೆ ಸಮೀಕ್ಷೆಯ ಅವಸರವೇನಿತ್ತು. ಸಮೀಕ್ಷೆಯಲ್ಲಿ ಮಾಹಿತಿ ನೀಡುವುದಕ್ಕೆ ಏನಿದೆ? ಇಲ್ಲದ ಮಾಹಿತಿ ಕೇಳಿದರೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರು.
ದಲಿತರ ನಿಜವಾದ ವಿರೋಧಿ ಎಂದರೆ ಅದು ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ 6 ಜಾತಿಗಳಿದ್ದವು ಅದರಲ್ಲಿ 101 ಜಾತಿಮಾಡಿರುವ ಕಾಂಗ್ರೆಸ್ ಮೀಸಲು ಪ್ರಮಾಣ ಹೆಚ್ಚಳಕ್ಕೆ ಯತ್ನಿಸದೆ ಶೇ.13ರಷ್ಟು ಮೀಸಲು ಉಳಿಸಿದೆ. ಈಗ ಹಿಂದುಳಿದ ವರ್ಗಗಳಿಗೆ ಬಿಡುಗಡೆಯಾಗಿದ್ದ 340 ಕೋಟಿ ರೂ.ಗಳನ್ನು ಹಿಂಪಡೆದು, ಸಮೀಕ್ಷೆಗೆ ಬಳಸುವುದಾಗಿ ಹೇಳಿದ್ದು, ಹಿಂದುಳಿದ, ದಲಿತ ವಿರೋಧಿಗಳು ನಾವೋ ಅಥವಾ ಕಾಂಗ್ರೆಸ್ಸಿಗರೋ ಎಂದು ಪ್ರಶ್ನಿಸಿದರು.