
ಪ್ರಗತಿವಾಹಿನಿ ಸುದ್ದಿ: ಒಂದು ವರ್ಷ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ 75 ವರ್ಷದ ವೃದ್ಧ 35 ವರ್ಷದ ಮಹಿಳೆಯೊಂದಿಗೆ ಮದುವೆಯಾಗಿದ್ದಾನೆ. ಆದರೆ ಮದುವೆಯಾದ ಮಾರನೆ ದಿನವೇ ವೃದ್ಧ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಚೌನ್ಪುರ ಜಿಲ್ಲೆಯ ಕುಚ್ಮುಚ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 75 ವರ್ಷದ ಸಂಗ್ರುರಾಮ್ ಎಂಬ ವೃದ್ಧ, 35 ವರ್ಷದ ಮಹಿಳೆಯನ್ನ ಮದುವೆಯಾದ ಮಾರನೇ ದಿನವೇ ಆತ ಸಾವನ್ನಪ್ಪಿದ್ದಾನೆ.
ಸೆಪ್ಟೆಂಬರ್ 29ರಂದು ಇಬ್ಬರೂ ನ್ಯಾಯಾಲಯದಲ್ಲಿ ಮದುವೆ ನೋಂದಾಯಿಸಿಕೊಂಡು ನಂತರ ಸ್ಥಳೀಯ ದೇವಾಲಯದಲ್ಲಿ ಸಾಂಪ್ರದಾಯಿಕ ವಿಧಿಗಳೊಂದಿಗೆ ಹಸೆಮಣೆ ಏರಿದ್ದಾರೆ. ಮದುವೆಯ ರಾತ್ರಿ ಇಬ್ಬರೂ ದೀರ್ಘ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಪತ್ನಿ ಮನ್ನವತಿ ತಿಳಿಸಿದ್ದಾರೆ.
ಆದರೆ ಬೆಳಿಗ್ಗೆ ಸಂಗ್ರುರಾಮ್ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದರೂ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ವೃದ್ಧನ ಹಠಾತ್ ಸಾವು ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಸಹಜ ಸಾವೆಂದು ಹೇಳುತ್ತಿದ್ದರೆ, ಇನ್ನು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.