
ಪ್ರಗತಿವಾಹಿನಿ ಸುದ್ದಿ: ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕರಿಂದ 52 ಲಕ್ಷ ಹಣ ಪಡೆದು ವಂಚಿಸಿರುವ ಗ್ಯಾಂಗ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ.
ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಉದ್ಯೋಗಗಳಿದ್ದು, ಕೆಲ ವರ್ಷಗಳ ಕಾಲ ಅಲ್ಲಿ ಕೆಲಸ ನಿರ್ವಹಸಿ ವಾಪಸ್ ಆದರೆ ಇಡೀ ಜೀವನವೇ ಸೆಟಲ್ ಆಗುತ್ತದೆ. ನಿರೀಕ್ಷೆಗೂ ಮೀರಿದ ಸಂಬಳ ಎಂದು ಹೇಳಿ ಯುವಕರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಗ್ಯಾಂಗ್ ವೊಂದು 52 ಲಕ್ಷ ಹಣ ಪಡೆದು ವಂಚಿಸಿದೆ.
ಕೆಲಸ ಸಿಗುವ ಆಸೆಯಿಂದ 30 ಯುವಕರು ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಕೇರಳ ಹಾಗೂ ಕರ್ನಾಟಕ ಗಡಿ ಭಾಗದ ಯುವಕರನ್ನೇ ಟಾರ್ಗೆಟ್ ಮಾಡಿರುವ ಗ್ಯಾಂಗ್ ಉದ್ಯೋಗದ ಆಮಿಷವೊಡ್ಡಿ, ಯುವಕರಿಂದ ಹಂತ ಹಂತವಾಗಿ ಹಣ ಪಡೆದುಕೊಂಡಿದೆ. ಉದ್ಯೋಗವೂ ಇಲ್ಲದೇ, ಹಣವೂ ವಾಪಸ್ ಆಗದೇ ಇದ್ದಾಗ ಅರಿತ ಯುವಕರು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರು ಹೊನ್ನಾವರದ ಜಾಫರ್ ಸಾದಿಕ್ ಮೊಕ್ತೇಸರ್, ನೌಶಾದ್ ಕ್ವಾಜಾ, ಹೈದರಾಬಾದ್ ಮೂಲದ ಸುಜಾತ ಜಮ್ಮಿಯನ್ನು ಬಂಧಿಸಿದ್ದಾರೆ. ಮಂಗಳೂರು, ಕಾಸರಗೋಡು, ಉತ್ತರಕನ್ನಡ ಜಿಲ್ಲೆಗಳಲ್ಲಿ ಉತ್ತಮ ಸಂಪರ್ಕ ಹೊಂದಿದ್ದ ನೌಶಾದ್ ಮಧ್ಯವರ್ತಿಯಾಗಿದ್ದ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ಮುಂದುವರೆದಿದೆ.