ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸಲ್ಲ -ಲಕ್ಷ್ಮಣ ಸವದಿ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಅನ್ಯಾಯವಾದರೆ ನಾವು ಸಹಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಲ್ಲಿನ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಗಡಿ ಸಂಬಂಧ ಅನವಶ್ಯಕವಾಗಿ ಹೇಳಿಕೆ ನೀಡಿದ್ದಾರೆ. ಅವರು ಈ ಹಿಂದೆ ರಾಜ್ ಠಾಕ್ರೆ ನೀಡಿದ್ದ ಹೇಳಿಕೆಯನ್ನು ನೆನಪಿಸಿಕೊಳ್ಳಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಗಡಿ ವಿಷಯ ಕೆದಕುವುದು ಸರಿಯಲ್ಲ ಎಂದಿದ್ದಾರೆ.
ಕನ್ನಡಿಗರ, ಕರ್ನಾಟಕದ ನೆಲ, ಜಲ ರಕ್ಷಣೆಗೆ ಸರಕಾರ ಬದ್ದವಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದೂ ಅವರು ಹೇಳಿದ್ದಾರೆ.
ಶೀಘ್ರ ಸಭೆ
ಇದೇ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗಡಿ ವಿಷಯ ಸಂಬಂಧ ಕಾನೂನು ಹೋರಾಟದ ವಿಷಯವಾಗಿ ಚರ್ಚಿಸಲು ಮುಖ್ಯಮಂತ್ರಿಗಳು ಶೀಘ್ರದಲ್ಲೇ ಸಭೆಯೊಂದನ್ನು ನಡೆಸಲಿದ್ದಾರೆ ಎಂದಿದ್ದಾರೆ.
ಗಡಿ ವಿವಾದ ಮಹಾಜನ್ ವರದಿ ಪ್ರಕಾರ ಮುಗಿದ ಅಧ್ಯಾಯ. ಆದರೂ ಅನಗತ್ಯವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕೆದಕುತ್ತಿದ್ದಾರೆ. ಈ ಹಿಂದೆ ಶರದ್ ಪವಾರ್ ಈ ಬಗ್ಗೆ ಮಾತನಾಡುತ್ತಿದ್ದರು. ಆದರೆ ನಂತರ ಅವರಿಗೆ ನಿಜ ವಿಷಯ ಅರಿವಾಗಿ, ಇನ್ನು ಮುಂದೆ ಗಡಿ ವಿಷಯದ ಕುರಿತು ಮಾತನಾಡುವುದಿಲ್ಲ ಎಂದು ಆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈಗ ಉದ್ಧವ್ ಠಾಕ್ರೆ ಮಾತನಾಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಶಾಂತಿ, ಸುವ್ಯವಸ್ಥೆ ಕಾಪಾಡಲು ಗಡಿ ಭಾಗದಲ್ಲಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುವಂತೆ ಬೆಳಗಾವಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಬೊಮ್ಮಾಯಿ ತಿಳಿಸಿದರು.
ಒಂದಿಂಚೂ ಭೂಮಿ ಕೊಡಲ್ಲ -ಶಿವಸೇನೆಗೆ ಯಡಿಯೂರಪ್ಪ ಖಡಕ್ ಸಂದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ