Kannada NewsKarnataka NewsPolitics

*ಬೆಂಗಳೂರಿನ ಟನಲ್ ರಸ್ತೆಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಮೆಚ್ಚುಗೆ*

ಚುನಾವಣೋತ್ತರ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ: “ಕರ್ನಾಟ ಅಭಿವೃದ್ಧಿ ವಿರೋಧಿ ಪಕ್ಷ ಎಂದರೆ ಅದು ಬಿಜೆಪಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

ಟನಲ್ ರಸ್ತೆಗೆ ಟೆಂಡರ್ ಅರ್ಜಿ ಹಾಕುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ ಎಂದು ಕೇಳಿದಾಗ, “ಎಷ್ಟು ಮಂದಿ ಗುತ್ತಿಗೆದಾರರು ಟೆಂಡರ್ ನಲ್ಲಿ ಅರ್ಜಿ ಹಾಕಿದ್ದಾರೆ ಎಂದು ಒಂದೆರಡು ದಿನಗಳಲ್ಲಿ ತಿಳಿಯುತ್ತದೆ. ನಮ್ಮ ಟನಲ್ ರಸ್ತೆಯ ಸ್ವರೂಪ, ಗಾತ್ರದ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ, ಮುಂಬೈ, ದೆಹಲಿ, ಪುಣೆಯವರು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಶೇ.50ರಷ್ಟು ಭಾಗ ಕಲ್ಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ನಾವು ಮೆಟ್ರೋ ಯೋಜನೆ ಮಾಡಿದ್ದೇವೆ. ಮೆಟ್ರೋ 50% ಮಾರ್ಗ ಟನಲ್ ರೂಪದಲ್ಲಿದೆ. ಆಗ ಯಾರೂ ಮಾತನಾಡಲಿಲ್ಲ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಬೇರೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ನನಗಾಗಿ ಮಾಡುತ್ತಿರುವ ಯೋಜನೆಯಲ್ಲ. ಇದು ಮುಂದಿನ ಪೀಳಿಗೆಯ ಭವಿಷ್ಯಕ್ಕೆ, ಬೆಂಗಳೂರಿಗಾಗಿ” ಎಂದು ತಿರುಗೇಟು ನೀಡಿದರು.

Home add -Advt

ಇದು ನಿಮ್ಮ ಕನಸಿನ ಯೋಜನೆ ಎಂದು ಕೇಳಿದಾಗ, “ಇದು ನನ್ನ ಕನಸಿಗಿಂತ ಯುವಕರ ಕನಸು. ನನಗೆ ಗಡ್ಕರಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ. ಮೋದಿ ಅವರಿಗೆ ಡಬಲ್ ಡೆಕ್ಕರ್ ಯೋಜನೆ ತೋರಿಸಿದೆ. ಪುಣೆ, ಬಾಂಬೆಯಲ್ಲಿ ಟನಲ್ ರಸ್ತೆ ಮಾಡಿದ್ದಾರೆ. ಅಲ್ಲಿ ಎಲ್ಲವೂ ಸರಿಯಾಗಿದೆ. ಕರ್ನಾಟಕದಲ್ಲಿ ಏನೇ ಮಾಡಲು ಹೋದರೂ ವಿರೋಧ ಮಾಡುತ್ತಿದ್ದಾರೆ. ನಾನು ಇದೇ ವಿಧಾನಸೌಧದ ಪಕ್ಕದ ಕೊಠಡಿಯಲ್ಲಿ ಬೆಂಗಳೂರಿನ ಶಾಸಕರನ್ನು ಕರೆದು ಸಭೆ ಮಾಡಿದಾಗ ಏನೇನು ಮಾಡಲು ಹೋರಟಿದ್ದೇನೆ ಎಂದು ಟನಲ್ ರಸ್ತೆ ಬಗ್ಗೆ ಹೇಳಿದಾಗ, ಎಲ್ಲರೂ ಒಪ್ಪಿಕೊಂಡಿದ್ದರು. ಕೆಲವರು ವಿರೋಧ ಮಾಡುತ್ತಿದ್ದು, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ವಿರೋಧ ಇದ್ದಷ್ಟು ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಧ್ಯಮಗಳು ಕೆಲವು ಅಧ್ಯಯನ ಮಾಡಿ ವರದಿ ಬರೆದಿದ್ದಾರೆ. ಅವರ ವರದಿಯಲ್ಲಿ ಒಳ್ಳೆಯ ಅಂಶಗಳಿದ್ದರೆ ಅದನ್ನು ಸ್ವೀಕರಿಸುತ್ತೇವೆ. ತಪ್ಪಾಗಿದ್ದರೆ ತಿದ್ದುಕೊಳ್ಳಲು ಸಿದ್ಧರಿದ್ದೇವೆ. ಬಿಜೆಪಿಯವರು ಟೀಕೆ ಮಾಡಿ ಹೆಚ್ಚಿನ ಪ್ರಚಾರ ನೀಡುತ್ತಿದ್ದು, ಅವರಿಗೆ ಅಭಿನಂದನೆಗಳು” ಎಂದು ತಿವಿದರು.

ಚುನಾವಣೋತ್ತರ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ:

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್ ಡಿಎ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವರದಿ ಬಗ್ಗೆ ಕೇಳಿದಾಗ, “ನಾವು ಚುನಾವಣೋತ್ತರ ಸಮೀಕ್ಷೆಯನ್ನು ನಂಬುವುದಿಲ್ಲ. ಕರ್ನಾಟಕ ಚುನಾವಣೆ ವೇಳೆಯೂ ನಾನು ಈ ಸಮೀಕ್ಷೆಗಳನ್ನು ನಂಬಿರಲಿಲ್ಲ. ಯಾವ ಸಮೀಕ್ಷೆಗಳು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿರಲಿಲ್ಲ. ಈ ಸಮೀಕ್ಷೆಗಳು ನಮ್ಮ ಪರ ತೋರಿಸಿದರೂ ನಾನು ನಂಬುವುದಿಲ್ಲ. ತಟ್ಟೆಮರೆ ಏಟು ಯಾವ ರೀತಿ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ನಡೆದ ಉಪಚುನಾವಣೆ ವೇಳೆಯೂ ನಾನು ಮೂರಕ್ಕೆ ಮೂರು ಗೆಲ್ಲುತ್ತೇವೆ ಎಂದು ಹೇಳಿದ್ದೆ. ಫಲಿತಾಂಶ ಬರಲಿ ನೋಡೋಣ, ಇಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಬಿಹಾರದ ಜನ ಬದಲಾವಣೆ ಬಯಸುತ್ತಿದ್ದು, ಹೀಗಾಗಿ ಮಹಾಘಟಬಂಧನ ಗೆಲ್ಲುವ ಭರವಸೆ ಇದೆ. ಜನ ನೀಡುವ ಆಶೀರ್ವಾದ ನಿರಂತರ ಪ್ರಕ್ರಿಯೆ. ಗೆಲುವು ಸೋಲು ಸಹಜ” ಎಂದು ತಿಳಿಸಿದರು.

ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎಂದು ಕೇಳಿದಾಗ, “ಬಿಹಾರ ಚುನಾವಣೆ ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಕರ್ನಾಟಕ ಅಭಿವೃದ್ಧಿ, ಸಾಮಾಜಿಕ ಬದಲಾವಣೆ ನಾಯಕ” ಎಂದು ತಿಳಿಸಿದರು.

ನ.14 ರಂದು ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ

ಶರಾವತಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ನೀರಿನ ಹೆಜ್ಜೆ ಎಂಬ ಪುಸ್ತಕವನ್ನು ನ.14ರಂದು ಬಿಡುಗಡೆ ಮಾಡಲಿದ್ದೇವೆ. ನೆಹರೂ ಅವರ ಜನ್ಮದಿನ. ಅಂದು ನಾನು ಪುಸ್ತಕ ಬಿಡುಗಡೆ ಮಾಡಲಿದ್ದು, ಮಹದಾಯಿ, ಶರಾವತಿ, ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುತ್ತೇನೆ” ಎಂದರು.

ನಾವು ಒಟ್ಟಾಗಿದ್ದೇವೆ, ಮುಂದೆಯೂ ಒಟ್ಟಾಗಿರುತ್ತೇವೆ

ಡಿ.ಕೆ. ಶಿವಕುಮಾರ್ ಅವರು 2028ಕ್ಕೆ ಸಿಎಂ ಆಗಬೇಕು, ಅಲ್ಲಿಯವರೆಗೆ ಸಿದ್ದರಾಮಯ್ಯ ಅವರೇ ಸಿಎಂ. ಈ ಮಾತನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆ ನಿಂತು ಹೇಳುತ್ತೇನೆ ಎಂಬ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಮುಖ್ಯಮಂತ್ರಿ ಇದ್ದಾರೆ, ಇರಲಿ. ಅದರಲ್ಲಿ ತಪ್ಪೇನಿದೆ. ನಮಗೆ ಯಾವುದೇ ಬೇಸರವಿಲ್ಲ. ನಾವು ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ, ಒಟ್ಟಿಗೆ ಇದ್ದೇವೆ, ಮುಂದೆಯೂ ಒಟ್ಟಿಗೆ ಇರುತ್ತೇವೆ” ಎಂದು ತಿಳಿಸಿದರು.

ಕೇಂದ್ರ ಸಚಿವರ ಭೇಟಿ, ನನ್ನದೇ ಆದ ಯೋಜನೆ ರೂಪಿಸುತ್ತಿದ್ದೇನೆ

ಕೇಂದ್ರ ಸಚಿವರ ಭೇಟಿ ಬಗ್ಗೆ ಕೇಳಿದಾಗ, “ಕಳೆದ ದೆಹಲಿ ಪ್ರವಾಸದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ. ಈ ಬಾರಿ ಹೋದಾಗ ಭೇಟಿ ಮಾಡಬೇಕು. ನಾನು ನನ್ನದೇ ಆದ ಯೋಜನೆ ರೂಪಿಸುತ್ತಿದ್ದೇನೆ. ಮಹದಾಯಿ, ಎತ್ತಿನಹೊಳೆ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆ ತಕರಾರು ಹಾಕಿಕೊಂಡು ಕೂತಿದ್ದಾರೆ. ಅಲ್ಲಿ ಮಣ್ಣು ತೆಗೆದು ರೆವೆನ್ಯೂ ಭೂಮಿಯಲ್ಲಿ ಪಕ್ಕಕ್ಕೆ ಹಾಕಿದ್ದೇವೆ. ಈಗ ಅದನ್ನು ಅರಣ್ಯ ಭೂಮಿ ಎಂದು ಹೇಳುತ್ತಿದ್ದಾರೆ. ಅರಣ್ಯಕ್ಕೆ ಪರ್ಯಾಯ ಭೂಮಿ ನೀಡಲು ಮುಂದಾಗಿದ್ದೇವೆ. ಅದಕ್ಕೂ ಅನುಮತಿ ನೀಡುತ್ತಿಲ್ಲ. ಇದರಿಂದ ಯೋಜನಾ ವೆಚ್ಚ ಎಷ್ಟು ಏರಿಕೆಯಾಗಲಿದೆ. ಅವರು ನಮಗೆ ಕೊಡುವ ಹಣ ನೀಡುತ್ತಿಲ್ಲ, ಯೋಜನೆಗಳಿಗೆ ಅನುಮತಿಯನ್ನೂ ನೀಡುತ್ತಿಲ್ಲ. ರಾಜ್ಯಕ್ಕೆ ಯಾವ ರೀತಿ ಅನ್ಯಾಯವಾಗುತ್ತಿದೆ ಎಂಬುದನ್ನು ನ.14ರಂದು ಮಾತನಾಡುತ್ತಿದ್ದೇನೆ” ಎಂದು ತಿಳಿಸಿದರು.

ನಿಯೋಗದ ಜೊತೆ ಹೋಗುತ್ತೀರಾ ಎಂದು ಕೇಳಿದಾಗ, “ಕೇವಲ ನಿಯೋಗ ಮಾತ್ರವಲ್ಲ. ಈ ಬಾರಿ ದೊಡ್ಡ ಯೋಜನೆ ರೂಪಿಸಿದ್ದೇನೆ. ನಮ್ಮ ಸಂಸದರು ಹೋರಾಟ ಮಾಡಿದರೆ ಮಾತ್ರ ಸಂಸದರಾಗಿರಲು ಅರ್ಹರಿರುತ್ತಾರೆ. ಇಲ್ಲದಿದ್ದರೆ ಅವರು ತಮ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ” ಎಂದರು.

ಬೆಂಗಳೂರಿನಲ್ಲಿ ಮಾತನಾಡಿದರೆ ಆಗುವುದಿಲ್ಲ, ದೆಹಲಿಗೆ ಬನ್ನಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಅವರ ಮನೆಗೆ ಉಪಹಾರಕ್ಕೆ ಹೋಗುತ್ತಿದ್ದೇನೆ. ಸಂಸತ್ ಅಧಿವೇಶನದ ವೇಳೆ ಸಂಸದರನ್ನು ಕರೆದುಕೊಂಡು ಹೋಗಿ ಚರ್ಚೆ ಮಾಡಬೇಕು. ಅವರು ಕೇಂದ್ರ ಜಲಶಕ್ತಿ ಸಚಿವರು. ಅವರನ್ನು ಬಿಟ್ಟು ಏನು ಮಾಡಲು ಆಗುವುದಿಲ್ಲ” ಎಂದರು.

ಇತ್ತೀಚೆಗೆ ಡಿನ್ನರ್ ಪಾರ್ಟಿ ಹೆಚ್ಚಾಗುತ್ತಿದ್ದು, ನೀವು ಡಿನ್ನರ್ ಪಾರ್ಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ನಿತ್ಯ ಮಕ್ಕಳ ಜೊತೆ ಡಿನ್ನರ್ ಪಾರ್ಟಿ ಮಾಡುತ್ತೇನೆ” ಎಂದರು.

ನಾನೂ ದೆಹಲಿಗೆ ಹೋಗುತ್ತಿರುವೆ

ನ.15ರಂದು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುತ್ತಿದ್ದು, ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಕೇಳಿದಾಗ, “ನಾನು ಕೂಡ ದೆಹಲಿಗೆ ಹೋಗುತ್ತಿದ್ದೇನೆ. ಕಪಿಲ್ ಸಿಬಲ್ ಅವರು ನನ್ನ ವಕೀಲರು. ಬೆಂಗಳೂರಿಗೆ ಬಂದು ಅನೇಕ ಬಾರಿ ನನ್ನ ಪರ ವಾದ ಮಾಡಿದ್ದಾರೆ. ದೆಹಲಿಯಲ್ಲೂ ವಾದ ಮಾಡುತ್ತಿದ್ದು, ಅವರ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು, ನಾನು ಹೋಗುತ್ತಿದ್ದೇನೆ” ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿಮ್ಮ ಜೊತೆ ಸಿಎಂ ಚರ್ಚೆ ಮಾಡಿದ್ದಾರಾ ಎಂದು ಕೇಳಿದಾಗ, “ಇದೆಲ್ಲವೂ ಅವರ ಜವಾಬ್ದಾರಿ. ಅವರು ನನ್ನ ಬಳಿ ಈ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ನಾಲ್ವರು ಅಭ್ಯರ್ಥಿಗಳ ಶಿಫಾರಸ್ಸು ಪಟ್ಟಿಯನ್ನು ಇಂದು ಅಥವಾ ನಾಳೆ ದೆಹಲಿಗೆ ರವಾನಿಸುತ್ತಿದ್ದೇನೆ” ಎಂದರು.

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ರಾಜು ಕಾಗೆ ಅವರ ಪತ್ರದ ಬಗ್ಗೆ ಕೇಳಿದಾಗ, “ನನಗೆ ಆ ಬಗ್ಗೆ ಮಾಹಿತಿ ಇಲ್ಲ” ಎಂದರು.

ದೆಹಲಿ ಕಾರ್ ಬಾಂಬ್ ಸ್ಫೋಟದ ಬಗ್ಗೆ ಕೇಳಿದಾಗ, “ಇದು ಅತ್ಯಂತ ಗಂಭೀರ ವಿಚಾರ. ನಾವೆಲ್ಲರೂ ಜಾಗರೂಕರಾಗಿ ಇರಬೇಕು. ಭಾರತ ಸರ್ಕಾರ ದೇಶವನ್ನು ರಕ್ಷಣೆ ಮಾಡಬೇಕು” ಎಂದರು.

ಪ್ರಾಣಹಾನಿ ಹೆಚ್ಚುತ್ತಿದೆ

ಕೇಂದ್ರ ಸರ್ಕಾರದ ಕ್ರಮಗಳು ಸರಿಯಾಗಿವೆಯೇ ಎಂದು ಕೇಳಿದಾಗ, “ನಮಗೆ ಫಲಿತಾಂಶ ಮುಖ್ಯ. ಕೇಂದ್ರ ಸರ್ಕಾರದ ಕ್ರಮಗಳು ಫಲಿತಾಂಶ ನೀಡುವಂತಿರಬೇಕು. ಈ ಹಿಂದೆ ಅನೇಕ ವೈಫಲ್ಯಗಳಾಗಿವೆ. ಇದು ಮುಂದುವರಿಯುತ್ತಿದ್ದು, ಪ್ರಾಣಹಾನಿ ಹೆಚ್ಚುತ್ತಿವೆ” ಎಂದರು.

Related Articles

Back to top button