Latest

ಬೆಳಗಾವಿ ಸ್ಮಾರ್ಟ್ ಸಿಟಿ ಮತ್ತೆ ಕುರೇರ್ ಹೆಗಲಿಗೆ!

ಜಿಯಾವುಲ್ಲಾ ರಜೆ ಹಿನ್ನೆಲೆಯಲ್ಲಿ ಪ್ರಭಾರ ಜವಾಬ್ದಾರಿ; ಶನಿವಾರ ಪರಿಷ್ಕೃತ ಆದೇಶ
 ಸ್ಮಾರ್ಟ್ ಸಿಟಿ ಯೋಜನೆ ರಾಜ್ಯ ಸರಕಾರ-ಕೇಂದ್ರ ಸರಕಾರದ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದ ಮಧ್ಯೆ ಸಿಕ್ಕಿಕೊಂಡು ಒದ್ದಾಡುತ್ತಿರುವ ವಾಸನೆ ಬಡಿಯುತ್ತಿದೆ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ಜವಾಬ್ದಾರಿ ಮತ್ತೆ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಹೆಗಲಿಗೆ ಬಿದ್ದಿದೆ.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕ ಎಸ್.ಜಿಯಾವುಲ್ಲಾ ಒಂದು ತಿಂಗಳು ರಜೆಯ ಮೇಲೆ ತೆರಳಿರುವುದರಿಂದ ಆ ಜವಾಬ್ದಾರಿಯನ್ನು ಕುರೇರ್ ಅವರಿಗೆ ವಹಿಸಲಾಗಿದೆ. 

ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಎಂಡಿ, ಐಎಎಸ್ ಅಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಾಪಾಟಿ ಅವರಿಗೆ ಪ್ರಭಾರ ವಹಿಸಿ ಡಿಸೆಂಬರ್ 10ರಂದು ಹೊರಡಿಸಲಾಗಿದ್ದ ಆದೇಶವನ್ನು ಪರಿಷ್ಕರಿಸಿ ಶನಿವಾರ ಹೊಸ ಆದೇಶ ಹೊರಡಿಸಲಾಗಿದೆ.

ಜಿಯಾವುಲ್ಲಾ ಅವರು ಡಿಸೆಂಬರ್ 24ರಿಂದ ಜನೆವರಿ 25ರ ವರೆಗೆ ಖಾಸಗಿ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ರಜೆ ಹಾಕಿದ್ದಾರೆ. ಹಾಗಾಗಿ ಅವರ ಹೆಫ್ಸಿಬಾ ರಾಣಿ ಅವರಿಗೆ ಪ್ರಭಾರ ವಹಿಸಲಾಗಿತ್ತು. ಅವರು ಡಿ.24ರಂದು ಅಧಿಕಾರ ವಹಿಸಿಕೊಂಡಿದ್ದರು. ವಿಶೇಷವೆಂದರೆ ಶನಿವಾರ ಬೆಳಗ್ಗೆ ಕೂಡ ಪ್ರಮುಖ ಫೈಲ್ ಗಳನ್ನು ಅವರ ಸಹಿಗಾಗಿ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಲಾಗಿತ್ತು.

ಆದರೆ ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಅಧೀನ ಕಾರ್ಯದರ್ಶಿ ಕುಮಟಾ ಪ್ರಕಾಶ ಶನಿವಾರ ಮಧ್ಯಾಹ್ನದ ಹೊತ್ತಿಗೆ ಪರಿಷ್ಕೃತ ಆದೇಶ ಹೊರಡಿಸಿ, ಕುರೇರ ಅವರನ್ನು ಪ್ರಭಾರರನ್ನಾಗಿ ಮಾಡಿದ್ದಾರೆ. 

ಈ ಹಿಂದೆ ವ್ಯವಸ್ಥಾಪಕರಾಗಿದ್ದ ಮುಲ್ಲೈ ಮುಹಿಲನ್ ವರ್ಗವಾಗಿ ಹೋದ ನಂತರ ಕುರೇರ ಅವರನ್ನೇ ಸ್ಮಾರ್ಟ್ ಸಿಟಿ ಎಂಡಿ ಯನ್ನಾಗಿ ಮಾಡಲಾಗಿತ್ತು. ನಂತರ ವಿಧಾನಸಭೆ ಚುನಾವಣೆ ಹೊತ್ತಿಗೆ ಕುರೇರ ಬಾಗಲಕೋಟೆಗೆ ವರ್ಗವಾಗಿದ್ದರು. ಆಗ ಮಹಾನಗರ ಪಾಲಿಕೆ ಆಯುಕ್ತರಾಗಿ ಬಂದ ಕೃಷ್ಣೇಗೌಡ ತಾಯಣ್ಣವರ್ ಸ್ಮಾರ್ಟ್ ಸಿಟಿ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಚುನಾವಣೆ ಬಳಿಕ ಮತ್ತೆ ವಾಪಸ್ಸಾಗಿದ್ದ ಕುರೇರ್ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಎರಡರ ಹೊಣೆಯನ್ನೂ ವಹಿಸಿಕೊಂಡಿದ್ದರು.

ಆದರೆ ಈಚೆಗೆ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವರ್ಗವಾಗಿದ್ದ ಐಎಎಸ್ ಅಧಿಕಾರಿ ಜಿಯಾವುಲ್ಲಾ ಅವರುನ್ನು ಸ್ಮಾರ್ಟ್ ಸಿಟಿ ಎಂಡಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಜಿಯಾವುಲ್ಲಾ ಅಧಿಕಾರ ಸ್ವೀಕರಿಸಿ ಕೆಲವೇ ದಿನದಲ್ಲಿ ಪಂಚರಾಜ್ಯ ಚುನಾವಣೆಯ ಕರ್ತವ್ಯಕ್ಕಾಗಿ ತೆರಳಿದ್ದರು. ಪುನಃ ಬಂದು ಅಧಿಕಾರ ಸ್ವೀಕರಿಸಿದ ಕೆಲವೇ ದಿನದಲ್ಲಿ ರಜೆಯ ಮೇಲೆ ತೆರಳಿದ್ದಾರೆ.

ಹಿಂದೆ ಮುಲ್ಲೈ ಮುಹಿಲನ್ ರೂಪಿಸಿದ್ದ ಯೋಜನೆಯನ್ನು ಅವರ ವರ್ಗಾವಣೆ ನಂತರ ಸಂಸದ ಸುರೇಶ ಅಂಗಡಿ ಮತ್ತು ಶಾಸಕ ಫಿರೋಜ್ ಸೇಠ್ ಬದಲಾವಣೆ ಮಾಡಿಸಿದ್ದರು. ತದನಂತರ ಅಭಯ ಪಾಟೀಲ ಶಾಸಕರಾಗಿ ಬಂದನಂತರ ಮತ್ತೆ ಅನೇಕ ಬದಲಾವಣೆ ಮಾಡಿಸಿದ್ದರು. ಅಧಿಕಾರಿಗಳ ಯೋಜನೆಗೂ ಜನಪ್ರತಿನಿಧಿಗಳ ಯೋಜನೆಗೂ ತಾಳೆಯಾಗದೆ ಪದೇ ಪದೆ ಬದಲಾವಣೆಯಾಗುತ್ತಿದೆ.

ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯನ್ನೂ 3 ಬಾರಿ ಕರೆದು ಮುಂದೂಡಲಾಗಿದೆ. ಶನಿವಾರ ನಡೆಯಬೇಕಿದ್ದ ಸಭೆಯನ್ನೂ ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ.

ಒಟ್ಟಾರೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೇಕೋ ಗ್ರಹಣ ಹಿಡಿದಂತಾಗಿದೆ. ಅಧಿಕೃತ ಅಂಕಿಅಂಶದ ಪ್ರಕಾರ ಈವರೆಗೆ ಕೇವಲ 14 ಕೋಟಿ ರೂ. ಮಾತ್ರ ಖರ್ಚಾಗಿದ್ದು, ಮೊದಲ ಹಂತದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿದ್ದರೂ ಪ್ರಗತಿಯಲ್ಲಿ ಮಾತ್ರ ತೀರಾ ಹಿಂದುಳಿದಿದೆ.

ಇದು ಒಂದು ಅರ್ಥದಲ್ಲಿ ರಾಜ್ಯ ಸರಕಾರ-ಕೇಂದ್ರ ಸರಕಾರದ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದ ಮಧ್ಯೆ ಸಿಕ್ಕಿಕೊಂಡು ಒದ್ದಾಡುತ್ತಿರುವ ವಾಸನೆ ಬಡಿಯುತ್ತಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button