ಪ್ರಗತಿವಾಹಿನಿ ಸುದ್ದಿ, ಗೋಕಾಕ: ವಾಲ್ಮೀಕಿ ನಾಯಕ ಸಮಾಜ, ಮುಸ್ಲಿಂ ಸಮಾಜ ಸೇರಿದಂತೆ ಇನ್ನಿತರ ಸಮಾಜಗಳು ಮತಚಲಾಯಿಸುವ ಸಮಯದಲ್ಲಿ ಗೊಂದಲದಲ್ಲಿದ್ದರು. ಹೀಗಾಗಿ ಬಿಜೆಪಿ ಮತಗಳ ಅಂತರ ಕಡಿಮೆಯಾಗಿದೆ. ಮುಂದೆ ಹೀಗಾಗದಂತೆ ಒಗ್ಗಟ್ಟಾಗಿ ಕಾರ್ಯಕರ್ತರು ತಮ್ಮ ಚಿಕ್ಕಪುಟ್ಟ ವೈಮನಸ್ಸು ತೊರೆದು ಬಿಜೆಪಿಗಾಗಿ ಶ್ರಮಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಕರೆ ನೀಡಿದರು.
ಅವರು, ಶನಿವಾರ ಗೋಕಾಕ ಮತಕ್ಷೇತ್ರದ ಅಂಕಲಗಿ ಗ್ರಾಮದ ಪಿಕೆಪಿಎಸ್ ಸಭಾಂಗಣದಲ್ಲಿ ಜರುಗಿದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ, ಬಿಜೆಪಿಗೆ ಮತನೀಡಿದ ಎಲ್ಲ ಮತದಾರರಿಗೆ ಕೃತಜ್ಞೆತೆ ಸಲ್ಲಿಸಿ ಮಾತಾಡಿದರು.
ಕಳೆದ ೨೦ವರ್ಷಗಳಿಂದ ಕುಂದರನಾಡಿನ ಜನತೆ ನನ್ನನ್ನು ಅತ್ಯಧಿಕ ಮತಗಳ ಅಂತರ ನೀಡುತ್ತ ಬಂದಿದ್ದು, ಈ ಬಾರಿ ಉಪಚುನಾವಣೆಯಲ್ಲಿ ಜಾರಕಿಹೊಳಿ ಮನೆತನದಲ್ಲಿ ಇಬ್ಬರು ಸ್ಫರ್ಧೆ ಮಾಡಿದ್ದರಿಂದ ಮತದಾರರು ಗೊಂದಲಕ್ಕಿಡಾಗಿದ್ದರಿಂದ ಮತಗಳ ಅಂತರ ಕಡಿಮೆಯಾಗಿದೆ. ಹೀಗಾಗಿ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೊಂದಲಕ್ಕಿಡಾಗದೆ ಒಗ್ಗಟ್ಟಾಗಿ ಬಿಜೆಪಿಗೆ ಮತನೀಡಿ ಆಶೀರ್ವದಿಸುವಂತೆ ತಿಳಿಸಿದರು.
ನಮ್ಮ ವಿರೋಧಿಗಳು ಚುನಾವಣಾ ಸಮಯದಲ್ಲಿ ಮಾತ್ರ ತಮ್ಮತ್ತ ಬರುತ್ತಾರೆ. ಉಳಿದ ಸಮಯದಲ್ಲಿ ನಾನು ನಿಮ್ಮ ಜೊತೆಗೆ ಇರುತ್ತೇನೆ. ಇದನ್ನು ಮನಗಂಡು ಕುಂದರನಾಡಿನ ಜನತೆ ನಮ್ಮ ವಿರೋಧಿಗಳಿಗೆ ತಕ್ಕ ಪಾಠಕಲಿಸಲು ಮುಂದಾಗಬೇಕೆಂದರು.
ಗೋಕಾಕ ಮತಕ್ಷೇತ್ರದಲ್ಲಿ ಇನ್ನೂ ಹಲವಾರು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ನೀಡುವ ದೃಷ್ಟಿಯಿಂದ ನೀರಾವರಿ ಯೋಜನೆಗೆ ಮೊದಲ ಆದ್ಯತೆ ನೀಡುತ್ತೆವೆ. ಮೂಲಭೂತ ಸೌಲಭ್ಯ, ಶಾಲೆ ಸೇರಿದಂತೆ ಇನ್ನೂ ಹಲವಾರು ಯೋಜನನೆಗಳ ಮೂಲಕ ಕುಂದರನಾಡು ಭಾಗದ ಎಲ್ಲ ಹಳ್ಳಿಗಳ ಅಭಿವೃದ್ಧಿಗೆ ಅತಿ ಶೀಘ್ರದಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುವದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಇದಕ್ಕೂ ಮೊದಲು ಏಳಪಟ್ಟಿ, ಗಡಾ, ಗಡಾ ಕ್ರಾಸ್, ಪಂಜಾನಟ್ಟಿ, ದಾವಲತ್ತಿ, ರಾಜನಕಟ್ಟಿ, ಲಗಮೇಶ್ವರ, ಮಲಾಮರಡಿ, ಗುಜನಾಳ ಗ್ರಾಮಗಳಿಗೆ ತೆರಳಿ ಮಹತ್ವದ ಉಪಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಆಶೀರ್ವದಿಸಿದ ಎಲ್ಲ ಕುಂದರನಾಡಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ಅಂಕಲಗಿ ಗ್ರಾಪಂ ಸದಸ್ಯ ರಾಜು ತಳವಾರ, ಗುಜನಾಳ ಗ್ರಾಪಂ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ, ಜಿಪಂ ಸದಸ್ಯ ಟಿ ಆರ್ ಕಾಗಲ, ಗ್ರಾಮೀಣ ಬಿಜೆಪಿ ಅಧ್ಯಕ್ಷ ವೀರುಪಾಕ್ಷ ಯಲಿಗಾರ, ಮುಖಂಡರಾದ ಬಸಗೌಡ ನಿರ್ವಾಣಿ, ಅಡಿವೆಪ್ಪ ನಾವಲಗಟ್ಟಿ, ಮಲ್ಲಿಕಾರ್ಜುನ ನಾಯಕ, ಮುನ್ನಾ ದೇಸಾಯಿ, ವೀರುಪಾಕ್ಷ ಅಂಗಡಿ, ಚಂದ್ರಪ್ಪ ಭೂಸನ್ನವರ, ಉಮೇಶ ನಿರ್ವಾಣಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಅನೇಕರು ಇದ್ದರು.
———————————————————————-
ಗೋಕಾಕ ಮತಕ್ಷೇತ್ರದ ಏಳಪಟ್ಟಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕ್ರೇನ್ ಮೂಲಕ ಸೇಬು ಹಣ್ಣಿನ ಹಾರ ಹಾಕಿ ಗ್ರಾಮಕ್ಕೆ ಸ್ವಾಗತಿಸಿದರು.
ಇತ್ತೀಚೆಗೆ ಜರುಗಿದ ಉಪಚುನಾವಣೆಯಲ್ಲಿ ಭರ್ಜರಿ ಮತಗಳ ಅಂತರದಿಂದ ವಿಜಯ ಸಾಧಿಸಿ ಪ್ರಥಮ ಬಾರಿಗೆ ಏಳಪಟ್ಟಿ ಗ್ರಾಮಕ್ಕೆ ಆಗಮಿಸಿದ ಶಾಸಕರನ್ನು ಭವ್ಯ ಮೆರವಣಿಗೆ ಮೂಲಕ ಅಭಿಮಾನಿಗಳು ದಾರಿಯೂದ್ದಕ್ಕೂ ಹೂಮಳೆ ಸುರಿಸಿ, ಸೇಬಿನ ಹಾರ ಹಾಕಿ ಗ್ರಾಮಕ್ಕೆ ಬರಮಾಡಿಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ