
ಪ್ರಗತಿವಾಹಿನಿ ಸುದ್ದಿ: ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯವಾಗಿ ಒಂದೇ ದಿನ ಬರೋಬ್ಬರಿ 550 ವಿಮಾನಗಳ ಸಂಚಾರ ರದ್ದಾಗಿದೆ. ಇದರ ಪರಿಣಾಮ ಪ್ರಯಾಣಿಕರು ಪರದಾಡಿದ್ದಾರೆ.
ಸಿಬ್ಬಂದಿಯ ಕೊರತೆಯಿಂದಾಗಿ ಇಂಡಿಗೋ ದೇಶೀಯ, ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಿದೆ. ಇದರಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಒಂದರಲ್ಲೇ ಒಟ್ಟು 205 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಕಳೆದ 3 ದಿನಗಳಿಂದ ಈ ಸಮಸ್ಯೆ ಆಗುತ್ತಿದ್ದು, ಸಾವಿರಾರು ಪ್ರಯಾಣಿಕರು ಪರದಾಡಿದ್ದಾರೆ.
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬ ಆಗಿದ್ದರಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಡಿದರು. ಬೆಂಗಳೂರಿಗೆ ಬರಲಾಗದೇ 20 ಕನ್ನಡಿಗರು ಒದ್ದಾಡುವಂತಾಯಿತು. ಗಂಟೆಗಟ್ಟಲೇ ವಿಮಾನ ನಿಲ್ದಾಣದಲ್ಲೇ ಕಾದು ಕುಳಿತ ದೃಶ್ಯಗಳು ಕಂಡುಬಂದಿವೆ
ಅನೇಕ ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಿಸಿಕೊಂಡ ಬಳಿಕ ಪ್ರಯಾಣ ವಿಪರೀತ ವಿಳಂಬ ಮಾಡಿದ ಘಟನೆಯೂ ನಡೆಯಿತು, ವಿಮಾನದೊಳಗೆ ಲಾಕ್ ಆದ ಪ್ರಯಾಣಿಕರು, ಇಂಡಿಗೋ ವಿಮಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳು ಹೇಳಿ ನಮ್ಮ ಸಮಯ ಹಾಳು ಮಾಡುತ್ತಿದ್ದಾರೆ. ಮತ್ತೊಂದೆಡೆ, ತಾವು ಪ್ರಯಾಣಿಸಬೇಕಿದ್ದ ವಿಮಾನ ರದ್ದಾದ ಬಗ್ಗೆ ಮೊದಲೇ ಮಾಹಿತಿ ನೀಡಿಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.



