2019 ಸನ್ಮಂಗಳವನ್ನುಟುಮಾಡಿ, ಸುಭಿಕ್ಷೆಯನ್ನು ಕರುಣಿಸಲಿ
ಕೆ ಜಿ ಕೃಪಾಲ್
ದೇಶವು ಪ್ರಗತಿಪಥದಲ್ಲಿದೆ, ರಾಜ್ಯಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಪ್ರತಿಷ್ಠೆ ಹೆಚ್ಚುತ್ತಿದೆ. ಭಾರತದ ಷೇರುಪೇಟೆಯು ವಿಶ್ವದ ಏಳನೇ ಸ್ಥಾನದಲ್ಲಿದೆ. ವಿಶ್ವದ ಆರನೇ ಸಿರಿವಂತ ದೇಶ ಎಂಬ ಸಕಾರಾತ್ಮಕ ಭಾವನೆಗಳನ್ನು ಜನಮನದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಒಂದು ಕಡೆಯಾದರೆ ಆಂತರಿಕವಾಗಿ ನಡೆಯುತ್ತಿರುವ ಹಗರಣಗಳು, ಆರ್ಥಿಕ ಶೋಷಣೆಗಳು, ಘೋಷಣೆಯಾದ ಯೋಜನೆಗಳನ್ನು ಜಾರಿಗೆ ತರಲಾಗದೆ ಆಗುತ್ತಿರುವ ಶೋಷಣೆಗಳು, ತಳಮಟ್ಟದ, ಮಧ್ಯಮ ವರ್ಗದವರ ದಿನನಿತ್ಯದ ಬವಣೆ ಹೆಚ್ಚಾಗಿ ಅಸಮಾಧಾನ ತುಂಬಿ ತುಳುಕಾಡುತ್ತಿದೆ. ಜನಸಾಮಾನ್ಯರಲ್ಲಿ ಸಿನಿಮೀಯ ಶೈಲಿಯಲ್ಲಿ ಎಲ್ಲವನ್ನು ತ್ವರಿತವಾಗಿ ಪಡೆಯಬಹುದು ಎಂಬ ಭಾವನೆ ಬಿತ್ತಿ ಅವರಲ್ಲಿ ಸಹನೆ, ತಾಳ್ಮೆಗಳು ಮಾಯವಾಗುವಂತೆ ಮಾಡಿ, ಈ ಆಸೆಯ ಕಾರಣ ವಂಚಿಸಲಾಗುತ್ತಿದೆ.
ಜನಸಾಮಾನ್ಯರ ಖರೀದಿಸುವ ಸಾಮರ್ಥ್ಯವು ಕ್ಷೀಣಿಸುತ್ತಿದೆ. ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿರುವ ಗ್ರಾಹಕ ವೃಂದದ ಖರೀದಿ ಸಾಮರ್ಥ್ಯವು ಹೆಚ್ಚುವವರೆಗೂ ಯಾವ ಯೋಜನೆಯೂ ಯಶಸ್ಸು ಕಾಣಲಾಗದು. ಈ ದಿಸೆಯಲ್ಲಿ ಭಾವನೆಗಳನ್ನು ಮತ್ತು ವಾಸ್ತವವನ್ನು ಬೇರ್ಪಡಿಸಿ ಪರಿಶೀಲಿಸಿ ನಿರ್ಧರಿಸುವ ಚಿಂತನೆಯನ್ನು ಅಳವಡಿಸಿಕೊಂಡು ಆರ್ಥಿಕ ಸಾಕ್ಷರತೆಯನ್ನು ಬೆಳೆಸಿಕೊಳ್ಳಬಹುದಾಗಿದೆ. ಕೇವಲ ಸಾಕ್ಷರತೆಯೊಂದೇ ಸಾಲದು ಜೊತೆಗೆ ಆರ್ಥಿಕ ಸಾಕ್ಷರತೆ ಬೆಳೆಸಿಕೊಂಡಲ್ಲಿ ಜೀವನವು ಸುಖಕರವಾಗಿಸಲು ಸಾಧ್ಯ. 2018 ರ ನಿರ್ಗಮನವು ಅಸಹಜ ಚಿಂತನೆಗಳನ್ನು ಕೊಂಡೊಯ್ಯಲಿ, 2019 ಸದೃಢ ಆರ್ಥಿಕ ಸಾಕ್ಷರತಾ ಮಟ್ಟವನ್ನು ಹೆಚ್ಚಿಸಿ ಈಗಿನ ಜಿ ಎಸ್ ಟಿ ಸಮಯದಲ್ಲಿ ನಮಗೆ ಎನ್ ಎಸ್ ಟಿ ( ನೆಮ್ಮದಿ, ಸಂತೋಷ, ತೃಪ್ತಿ) ಒದಗಿಸಲಿ.
* ಸರ್ಕಾರಗಳು ಸಹ ಬ್ಯಾಲನ್ಸ್ ಶೀಟ್ ಬಗ್ಗೆ ಚಿಂತಿಸುವ ಈ ಪ್ರಕ್ರಿಯೆಯಲ್ಲಿ ವಿಮಾ ಕಂಪನಿಗಳು ಷೇರುವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ಲಿಸ್ಟಿಂಗ್ ಆಗಿ ಖಾಸಗಿ ವಲಯದ ಭಾಗಿತ್ವಕ್ಕೊಳಗಾದ ಕಾರಣ ಅವು ಸಹ ಸಾಮಾಜಿಕ ಬದ್ಧತೆಯಿಂದ ವ್ಯಾವಹಾರಿಕ ಬದ್ಧತೆಯತ್ತ ಜಾರಿಕೊಂಡಿವೆ.
* ರಾಜ್ಯ ಸರ್ಕಾರಕ್ಕೆ ರೈತ ಸಾಲ ಮನ್ನಾ ಮಾಡುವುದು ಮತ್ತು ಆಂತರಿಕ ಸಮನ್ವಯವೇ ಸಮಸ್ಯೆಯಾಗಿದೆ. ಇದೆ ರೀತಿ ಮುಂದುವರೆದರೆ ಸಾಲಮನ್ನಾ ಸೌಲಭ್ಯವನ್ನು ಇತರೆ ವಲಯಗಳಿಗೂ ಒದಗಿಸಬೇಕಾದ ಸಮಯ ಬರಬಹುದು.
* ಕೇಂದ್ರ ಸರ್ಕಾರಕ್ಕೆ ಬ್ಯಾಂಕಿಂಗ್ ಎನ್ ಪಿ ಎ ಗಳ ನಿಯಂತ್ರಣವೇ ತಲೆನೋವಾಗಿದೆ. ಬಂಡವಾಳ ಹಿಂತೆಗೆತ ಕಾರ್ಯಕ್ರಮ ಸ್ವಲ್ಪಮಟ್ಟಿನ ಕವಲು ದಾರಿಯಲ್ಲಿ ಸಾಗಿದ ಕಾರಣ ಸಂಪದ್ಭರಿತ, ಉತ್ತಮ ಲಾಭಗಳಿಕೆ ಕಂಪನಿಗಳು ಸಹ ಅತಿಯಾದ ಸುಲಭ ಬೆಲೆಯಲ್ಲಿ ವಹಿವಾಟಾಗುತ್ತಿದ್ದು, ಹೂಡಿಕೆದಾರರ ನಂಬಿಕೆಯನ್ನು ಕಳೆದುಕೊಂಡು, ಕಳೆಗುಂದಿವೆ. ಯೋಜಿಸುತ್ತಿರುವ ಐ ಪಿ ಒ ಗಳನ್ನು 2002 ರ ಕೆನರಾ ಬ್ಯಾಂಕ್ ಮತ್ತು 2003 ರ ಮಾರುತಿ ಸುಜುಕಿ ಗಳಿಗೆ ನಿಗದಿಪಡಿಸಿದ ವಿತರಣೆ ಬೆಲೆಯ ರೀತಿ ನಿಗಧಿ ಪಡಿಸಿದರೆ ಆಗಿನಂತೆ ಪೇಟೆ ಮತ್ತೆ ಜೀವಕಳೆ ಪಡೆಯುವುದಲ್ಲದೆ ತೂಕಡಿಸುತ್ತಿರುವ ಪೇಟೆಯನ್ನು ಹುರಿದುಂಬಿಸಿ ಪುನಶ್ಚೇತನಗೊಳಿಸುವುದು.
* ಆರ್ ಬಿ ಐ ತನ್ನ ಸ್ವಾಯತ್ತತೆ ಉಳಿಸಿಕೊಂಡು ಸಾರ್ವಭೌಮತ್ವದಿಂ ಮೆರೆಯಲು ಹುನ್ನಾರ. ಭಾರತೀಯ ರಿಸರ್ವ್ ಬ್ಯಾಂಕ್ ನ ಬಿಗಿ ನೀತಿಯ ಕಾರಣ ೨೦೦೨ ರಲ್ಲಿ ನೆಡುಂಗಡಿ ಬ್ಯಾಂಕ್ ವಿಫಲವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿಲೀನಗೊಂಡದ್ದಾಗಲಿ, ೨೦೦೪ ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ವಿಫಲವಾಗಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ವಿನಲಿನಗೊಂಡದ್ದಾಗಲಿ, ೨೦೦೬ ರಲ್ಲಿ ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ವಿಫಲವಾಗಿ ಐ ಡಿ ಬಿ ಐ ಬ್ಯಾಂಕ್ ನಲ್ಲಿ ವಿಲೀನಗೊಂಡದ್ದಾಗಲಿ ಜನಮನದಲ್ಲಿ ಯಾವುದೇ ರೀತಿಯ ಅನುಮಾನ ಮೂಡದೇ ನಂಬಿಕೆಯನ್ನು ದೃಢವಾಗಿಸಿತ್ತು. ಆದರೆ ಬದಲಾದ ಒತ್ತಡಮಯ ಸನ್ನಿವೇಶವು ಭಾರತೀಯ ರಿಸರ್ವ್ ಬ್ಯಾಂಕ್ ನ ಬಿಗಿ ನೀತಿ ಬದಲಾಗದಂತೆ ನೋಡಿಕೊಳ್ಳಬೇಕು, ಈ ಮೂಲಕ ಆರ್ ಬಿ ಐ ಮೇಲಿನ ನಂಬಿಕೆ ಉಳಿದುಕೊಳ್ಳುವಂತಾಗಬೇಕು.
* ಕಾರ್ಪೊರೇಟ್ ವಲಯದಲ್ಲಿ ಕಂಪನಿಗಳು ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ವಿವಿಧ ರೀತಿಯ ಸಂಪನ್ಮೂಲ ಸಂಗ್ರಹಣೆಗೆ ಹಾತೊರೆಯುತ್ತಿವೆ. ಕೆಲವು ಕಂಪನಿಗಳು ನಿರಂತರವಾದ ಬಾಂಡ್ ಯೋಜನೆಗಳ ಮೂಲಕ ಹಣ ಸಂಗ್ರಹಣೆ ಮಾಡುತ್ತಿವೆ. ಬಿಗಿ ನಿಯಮಾವಳಿಗಳ ಕಾರಣ ಗತಿಸಿದ 2018 ರಲ್ಲಿ ಸುಮಾರು ಒಂದು ಲಕ್ಷ ಕಂಪನಿಗಳು ತಮ್ಮ ನೋಂದಾವಣೆಯನ್ನು ಹಿಂಪಡೆದಿವೆ ಎಂದು ಸರ್ಕಾರ ತಿಳಿಸಿದೆ. ‘ ಕಲ್ಟಿವೇಟ್ ಅಂಡ್ ಕರ್ಬ್ ‘ ಶೈಲಿಯಲ್ಲಿ ವ್ಯವಹಾರಗಳು ನಡೆಯುತ್ತಿರುವುದನ್ನು ಬಳಕೆದಾರರು ಅರಿಯಬೇಕು. ಆರಂಭದಲ್ಲಿ ವೈವಿಧ್ಯಮಯ ಯೋಜನೆಗಳು, ಡೀಪ್ ಡಿಸ್ಕೌಂಟ್, ಆಫರ್ ಗಳ ಮೂಲಕ ಜನರಲ್ಲಿ ಚಟವನ್ನು ಬೆಳೆಸಿ ನಂತರ ದರವನ್ನು ಹೆಚ್ಚಿಸಿ ಲಾಭ ಮಾಡಿಕೊಳ್ಳುವ ವಿಧಗಳಿಂದ ಬಳಕೆದಾರ ಗ್ರಾಹಕರು ಎಚ್ಚರ ವಹಿಸಬೇಕು.
* ಬ್ಯಾಂಕಿಂಗ್ ವಲಯದ ಎನ್ ಪಿ ಎ ನಿಯಂತ್ರಣ, ಹೆಚ್ಚುತ್ತಿರುವ ಖರ್ಚು ವೆಚ್ಚಗಳಿಗೆ ಹಣ ಒದಗಿಸುವುದಕ್ಕೆ ನವನವೀನ ಶುಲ್ಕಗಳ ಅನುಸಂಧಾನ. ಬ್ಯಾಂಕ್ ಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಕೆಲವು ಅಸಹಜ, ಅಸ್ವಾಭಾವಿಕ ವಿಧಗಳಲ್ಲಿ ಶುಲ್ಕ ವಿಧಿಸಿ ಗ್ರಾಹಕರಿಂದ ವಸೂಲಿ ಮಾಡುತ್ತಿವೆ. ಇದು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಸುಮಾರು ರೂ.10 ಸಾವಿರ ಕೋಟಿಯಷ್ಟಿದೆ. ಆದರೆ ಸೇವೆ ಎಂಬುದು ಮಾತ್ರ ಮಾಯವಾಗಿದೆ. ಬ್ಯಾಂಕ್ ಗಳು ತಮ್ಮ ವಹಿವಾಟಿನ ವೃದ್ಧಿಗಾಗಿ ವಿವಿಧ ಮೂಲಗಳಿಂದ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿದ್ದು, ಅವು ಠೇವಣಿ ಗಳಿಗೆ ನೀಡುವ ಬಡ್ಡಿ ಶೇ.7 ರಿಂದ 8 % ರಷ್ಟಿದ್ದರೆ, ಗಜಗಾತ್ರದ ಠೇವಣಿ ಸಂಗ್ರಹಣೆ ಕಾರ್ಯದಲ್ಲಿ ಶೇ.12 ರವರೆಗೂ ಬಡ್ಡಿ ನೀಡುತ್ತಿವೆ. ಈ ಸಾಲಪತ್ರಗಳು ಪೇಟೆಗಳಲ್ಲಿ ಲಭ್ಯವಿರುವುದರಿಂದ ಗ್ರಾಹಕರು ಭಾವನಾತ್ಮಕ ವಿಚಾರಗಳಿಂದ ಹೊರಬಂದು ಸತ್ಯಾಂಶ, ವಾಸ್ತವಾಂಶವನ್ನರಿತು ನಿರ್ಧರಿಸುವುದು ಬಂಡವಾಳ ಸುರಕ್ಷತೆಗೆ ಮೂಲವಾಗುತ್ತದೆ.
* ಮಾಲು, ಖಮಾಲು, ಗೋಲ್ಮಾಲು ಗಳ ನಡುವೆ ಸಣ್ಣ ವರ್ತಕರ ಉಳಿವು ಸರಳವಾಗಿಲ್ಲ. ಮಾಲುಗಳು ವಿವಿಧ ಯೋಜನೆಗಳ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದರಿಂದ ಸಣ್ಣ ಸಣ್ಣ ವರ್ತಕರು ಸುಲಭವಾಗಿ ವಹಿವಾಟು ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಜ ಪರಿಸ್ಥಿತಿ ಎಂದರೆ ಹೆಚ್ಚಿನ ಬಾರಿ ಸಣ್ಣ ವರ್ತಕರ ಬಳಿ ದೊರೆಯುವ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಕೆಲವು ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಬೆಲೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿ, ಅನುಕೂಲಕವಾಗಿ ನಿರ್ಧರಿಸುವುದು ಆರ್ಥಿಕ ಸಾಕ್ಷರತೆಯ ಏರಿಕೆಯ ಮೆಟ್ಟಿಲಾಗಿದೆ.
* ಎಲ್ಲೆಡೆ ಇ ಎಂ ಐ ( E M I ) ಗಳ ಜಾಲದಲ್ಲಿ ಸಿಕ್ಕಿಕೊಂಡ ಗ್ರಾಹಕನೇ ಎಲ್ಲಾ ವಲಯದವರಿಗೆ ಗುರಿಯಾಗಿ, ಹೆಸರು ಸಂಪತ್ತಯ್ಯ ಕಿಸೆಯಲ್ಲಿ ಕಾಸಿಲ್ಲ ಎಂಬಂತೆ, ಕೈಗೆ ಬರುವ ಹಣ ಮಂಜಿನಂತೆ ಕರಗಿಹೋಗುವ ಈಗಿನ ಜೀವನ ಶೈಲಿಗಳು ಸದಾ ಒತ್ತಡದಲ್ಲಿರಿಸಿದೆ.
* ಬಿಬಿಎಂಪಿ ಈ ವರ್ಷದಲ್ಲಿ ತೆರಿಗೆ ಸಂಗ್ರಹಣೆಯ ಗುರಿಯನ್ನು ಮೀರಿದ ಸಾಧನೆ ಮಾಡಿದ್ದರು ಸಹ ಶೇ.25 ರಿಂದ ಶೇ.30 ರಷ್ಟು ಅಸ್ತಿ ತೆರಿಗೆ, ಅಲ್ಲದೆ ವಿಶೇಷ ಮೇಲ್ತೆರಿಗೆಯನ್ನು ವಿಧಿಸುವ ಪರಿಶೀಲನೆಯಲ್ಲಿದೆ ಎಂಬುದು ವಿಪರ್ಯಾಸವೇ ಸರಿ.
ನಿರೀಕ್ಷೆ: ತೆರಿಗೆಗಳ ಮೂಲಕ ಸಂಗ್ರಹವಾದ ಹಣವನ್ನು ನಿರುಪಯುಕ್ತ ಕಾರ್ಯಗಳಿಗೆ ಸೋರಿಹೋಗದೆ ಸದ್ಬಳಕೆಯಾಗಿ ಜನ ಜೀವನವನ್ನು ಸುಧಾರಿಸುವಂತೆ ಮಾಡಲಿ. ದೊಡ್ಡ ದೊಡ್ಡ ಕುಳಗಳಿಂದ ಬಾಕಿ ಇರುವ ತೆರಿಗೆ ವಸೂಲಿಕೆ ಕ್ರಮ ಕೈಗೊಂಡು, ತೆರಿಗೆ ಹೆಚ್ಚಿಸುವ ಬದಲು ಇಳಿಕೆ ಮಾಡಿ ಜನಮೆಚ್ಚುಗೆ ಪಡೆಯಲು ಇದೊಂದು ಸದಾವಕಾಶ ಬಿಬಿಎಂಪಿ ಗೆ.
* ಎಲ್ಲರಿಗು ಅತ್ಯಗತ್ಯವಾಗಿರುವ ವಿದ್ಯುತ್, ನೀರು, ಹಾಲು, ಬಸ್ ಟಿಕೆಟ್ ದರ ಮುಂತಾದವುಗಳನ್ನು ಏರಿಕೆ ಮಾಡುವ ಮುನ್ಸೂಚನೆಗಳಿವೆ.
ನಿರೀಕ್ಷೆ: ವಿದ್ಯುತ್ ಮತ್ತು ನೀರು ಬಳಕೆಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಿತಬಳಕೆಗೆ ಹೆಚ್ಚು ಒಲವು ಮೂಡಿಸುವುದು, ಘೋಷಿಸಿದ ಯೋಜನೆಗಳನ್ನು ಸಕಾಲಾದಲ್ಲಿ ಜಾರಿಗೊಳಿಸಿ, ಜನಮೆಚ್ಚುಗೆ ಪಡೆಯುವಂತಾಗಲಿ. ಎಲ್ಲಾ ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಮಿತಗೊಳಿಸಲು, ಇದರ ಮೂಲಕ ವಾತಾವರಣ ಕಲುಷಿತಗೊಳ್ಳುವುದನ್ನು ತಪ್ಪಿಸಲು ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವಂತೆ ಮಾಡಬೇಕು. ಇದನ್ನು ಸಾಧಿಸಬೇಕಾದರೆ ಬಸ್ ಪ್ರಯಾಣ, ಮೆಟ್ರೋ ರೈಲ್ ಸಂಚಾರಗಳು ಸುಲಭ ಬೆಲೆಯಲ್ಲಿ ಲಭ್ಯವಾಗುವಂತಾಗಬೇಕು. ಆಗ ಅನೇಕ ನಕಾರಾತ್ಮಕ ಅಂಶಗಳು ಮಾಯವಾಗಿ ನೆಮ್ಮದಿಯ ವಾತಾವರಣ ಮೂಡುವುದು. ಅರೋಗ್ಯ ಸುಧಾರಣೆಗೂ ಸಹಕಾರಿಯಾಗುವುದು.
ಐ ಪಿ ಒ / ಎಫ್ ಪಿ ಒ ಗಳು ಹೇಗೆ ಹಣದುಬ್ಬರ ನಿಯಂತ್ರಣಕ್ಕೆ ಪೂರಕ?
ಹಿಂದಿನ ದಶಕದಲ್ಲಿ ಆರ್ಥಿಕ ಬೆಳವಣಿಗೆಗಳು, ಬದಲಾವಣೆಗಳು ಸ್ವಯಂಚಾಲಿತವಾಗಿದ್ದು ಸ್ವಾಭಾವಿಕವಾಗಿದ್ದು ಉತ್ತಮ ಫಲಿತಾಂಶಕ್ಕೆ ಪೂರಕವಾಗಿತ್ತು. ಆದರೆ ಈಗ ಎಲ್ಲವೂ ಕೃತಕಮಯವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ 2010 ರಲ್ಲಿ ನವರತ್ನಕಂಪನಿ ಕೋಲ್ಇಂಡಿಯಾ ಕಂಪನಿಯು ರೂ.15 ಸಾವಿರಕೋಟಿ ಸಂಗ್ರಹಣೆಯ ಉದ್ದೇಶದಿಂದ, ತನ್ನ ಚೊಚ್ಚಲ ಆರಂಭಿಕ ಷೇರುವಿತರಣೆ ಮಾಡಿತು. ಆ ಸಂದರ್ಭದಲ್ಲಿ ಸಾರ್ವಜನಿಕ ಸ್ಪಂಧನ ಹೆಚ್ಚಾಗಿ ಸುಮಾರು ಎರಡು ಲಕ್ಷಕೋಟಿ ಹಣ ಸಂಗ್ರಹಣೆಯಾಯಿತು. ಅಂದರೆ ಸುಮಾರು ರೂ.1.85 ಲಕ್ಷ ಕೋಟಿ ಹೆಚ್ಚು ಸಂಗ್ರಹವಾಗಿ, ಅಷ್ಟು ಹಣ ಪೇಟೆಯಿಂದ ಸ್ವಲ್ಪ ಸಮಯದವರೆಗೂ ದೂರ ಸರಿಯಿತು. ಇದು ಹಣದುಬ್ಬರದ ನಿಯಂತ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಪೇಟೆಯಿಂದ ಹಣವನ್ನು ಸ್ಥಗಿತಗೊಳಿಸಲು ಬಾಂಡ್ ಮಾರಾಟ ಕ್ರಮವನ್ನು ತಪ್ಪಿಸಿ, ಹಣದುಬ್ಬರ ಸ್ವಾಭಾವಿಕವಾಗಿ ನಿಯಂತ್ರಣಕ್ಕೊಳಪಡುವಂತಾಯಿತು. ಇಂತಹ ಉತ್ತಮ ಕಂಪನಿಗಳು ಆಕರ್ಷಣೀಯ ಬೆಲೆಯಲ್ಲಿ ವಿತರಣೆ ಮಾಡಲು ಮುಂದಾದರೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಣ ಕಾರ್ಯ ನಿರ್ವಹಿಸುವುದು ಸುಲಭವಷ್ಟೇ ಅಲ್ಲ, ಈ ಮೂಲಕ ಹೂಡಿಕೆದಾರರೂ ಸಹ ಸ್ವಲ್ಪ ಲಾಭ ಗಳಿಕೆ ಮಾಡಿಕೊಳ್ಳಲು ಸಹಾಯವಾಗಿ ವ್ಯಾವಹಾರಿಕ ಚಟುವಟಿಕೆಗಳು ವಿಜೃಂಭಿಸುವ ಮೂಲಕ ದೇಶದ ಆರ್ಥಿಕತೆ ಬಲಗೊಳ್ಳುತ್ತದೆ.
ಸರ್ಕಾರದ ನಿರ್ಧಾರಗಳೂ ವ್ಯವಹಾರಿಕವೇ?
ಆರಂಭಿಕ ಷೇರು ವಿತರಣೆಗಳಲ್ಲಿ ಜನಸಾಮಾನ್ಯರು ಭಾಗವಹಿಸುವುದರಿಂದ ಕಾರ್ಪೊರೇಟ್ ಗಳು ಸಹಜ, ಅರ್ಹಬೆಲೆಯಲ್ಲಿ ವಿತರಣೆ ಮಾಡಲು ಮುಂದಾದರೆ ಹೂಡಿಕೆಗೂ ಪ್ರೋತ್ಸಾಹಿಸುವದರ ಜೊತೆಗೆ ಹಣದುಬ್ಬರದ ನಿಯಂತ್ರಣವು ಸಾಧ್ಯವಾಗುತ್ತದೆ. ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಅದಕ್ಕೆ ಮೌಲೀಕರಣ ಮಾಡುವ ತಾಣವು ಷೇರುಪೇಟೆಯಾಗಿದೆ ಎಂಬ ಷೇರುಪೇಟೆಯ ಗುಣವನ್ನು ಆರಂಭಿಕ ಷೇರು ವಿತರಕರು ಸಹ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಹೊಸ ಷೇರುಗಳು ಲಿಸ್ಟಿಂಗ್ ಆದಮೇಲೆ ಬರಬಹುದಾದ ಲಾಭವನ್ನು ವಿತರಣೆ ಬೆಲೆಯಲ್ಲೇ ಸೇರಿಸಿ ಹೂಡಿಕೆದಾರರನ್ನು ಸೇವಾಕರ್ತರನ್ನಾಗಿಸಿದೆ. ಈ ಬೆಳವಣಿಗೆಯು ಹೂಡಿಕೆದಾರರ ಆಸಕ್ತಿ ಕರಗಿಸಿ ಪೇಟೆಯಿಂದ ದೂರ ಸರಿಯುವಂತೆ ಮಾಡುತ್ತದೆ. ಸಣ್ಣ ಹೂಡಿಕೆದಾರರ ಆಸಕ್ತಿ ಕ್ಷೀಣಿತವಾದಾಗ ಕಂಪನಿಗಳು ಐ ಪಿ ಒ ಗಳನ್ನೂ ತಡೆಹಿಡಿಯುತ್ತವೆ. ಇಂತಹ ಕ್ರಮಕ್ಕೆ ಸರ್ಕಾರಿ ಕಂಪನಿಗಳು ಸಹ ಹೊರತಲ್ಲ. 2011 ರಲ್ಲಿ ಒ ಎನ್ ಜಿ ಸಿ ಕಂಪನಿ ಪೇಟೆಯ ವಾತಾವರಣ ಸರಿಯಿಲ್ಲ ಎಂಬ ಕಾರಣಕ್ಕೆ ತನ್ನ ಎಫ್ ಪಿ ಒ ಹಿಂಪಡೆಯಿತು.
ಪ್ರಮುಖವಾಗಿ ಜನಸಾಮಾನ್ಯರು, ಹೂಡಿಕೆದಾರರು ಕೇವಲ ಪ್ರಕಟವಾಗುವ ಅಂಕಿ ಅಂಶಗಳಿಗೆ, ರೇಟಿಂಗ್ ಗಳಿಗೆ, ಪ್ರಚಾರಗಳಿಗೆ ಮರುಳಾಗದೆ ಸಹಜ, ವಾಸ್ತವಾಂಶಗಳನ್ನರಿತು, ನಮ್ಮ ಬಂಡವಾಳವನ್ನು ರಕ್ಷಿಸಕೊಳ್ಳುವತ್ತ ಆಧ್ಯತೆ ನೀಡಿದಲ್ಲಿ ಮಾತ್ರ ಸುರಕ್ಷತೆಯನ್ನು ಕಾಣಬಹುದು. ಸಾಕ್ಷರತೆಯೊಂದಿಗೆ ಆರ್ಥಿಕ ಸಾಕ್ಷರತೆಯು ಬೆರೆತಾಗ ಮಾತ್ರ ಜೀವನ ಸಾಕ್ಷಾತ್ಕಾರ ಸಾಧ್ಯ. 2019 ಈ ದಿಶೆಯಲ್ಲಿ ಎಲ್ಲರಿಗು ಸನ್ಮಂಗಳವನ್ನುಟುಮಾಡಿ, ಸುಭಿಕ್ಷೆಯನ್ನು ಕರುಣಿಸಲಿ.
(ಲೇಖಕರು ಆರ್ಥಿಕ ಅಂಕಣಕಾರರು, ಮೊ. 9886313380)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ