
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆ ಬೆಳೆಸಲು ಸರಕಾರ ಉತ್ಸುಕವಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ಭೇಟಿ ನೀಡಿ, ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಜಿಡಿಪಿ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಬಹಳಷ್ಟಿದೆ. ಹಾಗಾಗಿ ಎಲ್ಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಬಿಯಾಂಡ್ ಬೆಂಗಳೂರು ಎನ್ನುವ ದೃಷ್ಟಿಕೋನದಿಂದ ಸರಕಾರ ಕೆಲಸ ಮಾಡುತ್ತಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗೆ ಭೂಮಿ ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ಸಹ ಇಂದು ಬೇಕಾದಷ್ಟು ಸೌಲಭ್ಯ ಇದೆ. ಸರಕಾರದಿಂದಲೂ ಜಿಲ್ಲೆಗಳಲ್ಲಿ ಸೌಲಭ್ಯ ಕೊಡಲು ಈಗಾಗಲೇ ಸಿಎಂ ಜೊತೆ ಚರ್ಚೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೇಗಾದರೂ ಕೈಗಾರಿಕೆ ಬೆಳೆಸಬೇಕೆನ್ನುವುದು ನಮ್ಮ ಉದ್ದೇಶ. ಸರಕಾರಕ್ಕೆ ಮನಸ್ಸೂ ಇದೆ, ಉತ್ಸಾಹವೂ ಇದೆ ಎಂದರು.
ಶಾಸಕ ಅಭಯ ಪಾಟೀಲ್ ಮಾತನಾಡಿ, ಬಿಯಾಂಡ್ ಬೆಂಗಳೂರು ಎಂದರೆ ಹುಬ್ಬಳ್ಳಿವರೆಗೆ ಬಂದು ನಿಲ್ಲುತ್ತದೆ. ಮುಂದೆ ಸೌಲಭ್ಯಗಳು ಸಿಗುವುದಿಲ್ಲ. ಸರಕಾರದ ಸೌಲಭ್ಯ ಇಲ್ಲದೆ ಕೈಗಾರಿಕೆಗಳನ್ನು ಬೆಳೆಸಿದವರು ಬೆಳಗಾವಿಗರು. ಆದರೆ ಅಧಿಕಾರಿಗಳಿಂದ ಕಿರುಕುಳ ಜಾಸ್ತಿಯಾಗಿದೆ ಎಂದರು.
ಗಡಿ ಜಿಲ್ಲೆಯಾಗಿದ್ದರಿಂದ ಬಹಳಷ್ಟು ಅವಕಾಶವಿದೆ. ಆದರೆ ಮೊದಲಿನಿಂದಲೂ ಬೆಳಗಾವಿಯನ್ನು ಕಡೆಗಣಿಸಲಾಗುತ್ತಿದೆ. ಬೆಳಗಾವಿ ಮಾರ್ಕೆಟಿಂಗ್ ಮಾಡುವಲ್ಲಿ ನಾವೂ ವಿಫಲರಾಗಿದ್ದೇವೆ ಎಂದು ಅವರು ಹೇಳಿದರು.
ಫೌಂಡ್ರಿ ಕ್ಲಸ್ಟರ್ ಅಸೋಸಿಯೇಷನ್ ಅಧ್ಯಕ್ಷ ರಾಮ್ ಭಂಡಾರೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಇದ್ದರು.
ಚೆಂಬರ್ ಆಫ್ ಕಾಮರ್ಸ್ ಚೇರಮನ್ ಪ್ರಭಾಕರ ನಾಗರ ಮುನ್ನೋಳಿ ಸ್ವಾಗತಿಸಿದರು. ಆನಂದ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ವಂದಿಸಿದರು. ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಸಹ ಮನವಿ ಸಲ್ಲಿಸಲಾಯಿತು.


