*ಐದು ವರ್ಷ ನಾನೆ ಸಿಎಂ ಎಂದು ಸದನದಲ್ಲಿ ಹೇಳಿದ ಮೇಲೂ ಚರ್ಚಿಸುವ ಅಗತ್ಯವಿಲ್ಲ: ಗರಂ ಆದ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಸಂಪೂರ್ಣ ಅವಧಿಗೆ ನಾನೇ ಸಿಎಂ ಎಂದು ವಿಧಾನಸಭೆಯಲ್ಲಿ ಹೇಳಿದ ಮೇಲೂ ಮತ್ತೆ ಚರ್ಚಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ತೀರ್ಮಾನಿಸಬೇಕು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ನಾವು ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು ಎಂದರು.
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಒಪ್ಪಬೇಕಾದ ವಿಚಾರ. ಪಕ್ಷಕ್ಕಿಂತ ಯಾರೂ ದೊಡ್ಡವರಾಗಲು ಸಾಧ್ಯವೇ ಇಲ್ಲ. ಸಮಸ್ಯೆಗಳೇನಿದ್ದರೂ ಅದನ್ನು ಹೈಕಮಾಂಡ್ ಬಗೆಹರಿಸುತ್ತದೆ ಎಂದು ಹೇಳಿದರು.
ನಾಯಕತ್ವ ಬದಲಾವಣೆ ಕುರಿತು ಮಾಧ್ಯಮದಲ್ಲೇ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಆ ವಿಷಯದಲ್ಲಿ ಇಷ್ಟೊಂದು ಪ್ರಶ್ನಿಸುವ ಅಗತ್ಯವೇನಿದೆ? ವಿಧಾನಸಭೆಯಲ್ಲಿ ಹೇಳಿದ ಮೇಲೂ ಮತ್ತೆ ಚರ್ಚಿಸುವ ಅಗತ್ಯವಿಲ್ಲ. ಅಲ್ಲದೇ ಸಂಕ್ರಾಂತಿಗೆ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪುನರುಚ್ಚರಿಸಿದರು.



