*ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ 80 ಸಾವಿರ ಹಣ ಎಗರಿಸಿ ಎಸ್ಕೇಪ್ ಆದ ಖದೀಮರು*

ಪ್ರಗತಿವಾಹಿನಿ ಸುದ್ದಿ: ಬರ ಬರುತ್ತಾ ಮನುಷತ್ವ ಮಾನವೀಯತೆ ಎಂಬುದು ಜನರಲ್ಲಿ ಮಾಯವಾಗುತ್ತಿದೆ. ಇನ್ನು ಕಳ್ಳತನ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ದರೋಡೆ ಕೋರರಿಗೆ ಇದ್ಯಾವುದೂ ಲೆಕ್ಕಕ್ಕೂ ಬರುವುದಿಲ್ಲ. ಅಪಘಾತವಾಗಿ ಬಿದ್ದಿದ್ದ ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ, ಕಳ್ಳರಿಬ್ಬರು ಆತನ ಮೊಬೈಲ್ ನಿಂದ ಹಣ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ಈ ಘಟನೆ ನಡೆದಿದೆ. ಗಣೇಶ್ ಎಂಬ ವ್ಯಕ್ತಿ ಎಂದಿನಂತೆ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಗಣೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಇಬ್ಬರು ಖದೀಮರು ಅವರ ಮೊಬೈಲ್ ನಿಂದ ಯುಪಿಐ ಮೂಲಕ 80 ಸಾವಿರ ಹಣ ವರ್ಗಾಯಿಸಿಕೊಂಡು, ಆಸ್ಪತ್ರೆಗೆ ಸೇರಿಸದೇ ಎಸ್ಕೇಪ್ ಆಗಿದ್ದಾರೆ.
ಅಪಘಾತದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗಣೇಶ್ ಸಹೋದರ ಅಂಕನಾಯಕ್, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಣೇಶ್ ನೀಡಿದ್ದ ದೂರುನ ಮೇರೆಗೆ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಸಂಅಬ್ಂಧ ಮೈಸೂರಿನ ಮಹದೇವಪುರದ ನಿವಾಸಿ ರಮೇಶ್ ಹಾಗೂ ಮನು ಎಂಬುವವರನ್ನು ಬಂಧಿಸಿದ್ದಾರೆ. 80 ಸಾವಿರ ಹಣ ಹಾಗೂ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.


