
ಪ್ರಗತಿವಾಹಿನಿ ಸುದ್ದಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್. ಡಿ. ರೇವಣ್ಣಗೆ ನ್ಯಾಯಾಲಯ ರಿಲೀಫ್ ನೀಡಿದೆ.
ರೇವಣ್ಣ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACJM) ನ್ಯಾಯಾಲಯವು ಹೆಚ್.ಡಿ. ರೇವಣ್ಣ ಅವರನ್ನ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂಬ ಕಾರಣ ನೀಡಿ ನ್ಯಾಯಾಲಯವು ಪ್ರಕರಣವನ್ನು ರದ್ದುಗೊಳಿಸಿದೆ.
2024ರ ಏಪ್ರಿಲ್‌ನಲ್ಲಿ ಹೊಳೆನರಸೀಪುರ ಠಾಣೆಗೆ ದೂರು ನೀಡಿದ್ದ ಸಂತ್ರಸ್ತೆ ಮಹಿಳೆ, ಹೆಚ್. ಡಿ. ರೇವಣ್ಣ ತಮ್ಮ ಕೊಠಡಿಗೆ ಕರೆದು ಹಣ್ಣು ನೀಡುವ ನೆಪದಲ್ಲಿ ಮೈಮುಟ್ಟುತ್ತಿದ್ದರು, ಮನೆಯ ಸ್ಟೋರ್ ರೂಮಿನಲ್ಲಿ ಕೈ ಹಿಡಿದು ಎಳೆದು ಸೀರೆ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ, ಪ್ರಜ್ವಲ್ ರೇವಣ್ಣ ಕೂಡ ಹಿಂದಿನಿಂದ ಬಂದು ಮೈ ಮುಟ್ಟಿ, ಹೊಟ್ಟೆಯನ್ನು ಸ್ಪರ್ಶಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದರು.
ಮಹಿಳೆಯ ದೂರಿನ ಆಧಾರದ ಮೇಲೆ, ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354ಎ ಅಡಿಯಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತನಿಖಾ ತಂಡ (SIT) ಈ ಪ್ರಕರಣದ ತನಿಖೆ ನಡೆಸಿತ್ತು. ಈ ನಡುವೆ, ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಹೆಚ್. ಡಿ. ರೇವಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಲಯವು, ದೂರು ದಾಖಲಿಸುವಲ್ಲಿ ವಿಳಂಬ ಹಾಗೂ ಪ್ರಕರಣದ ವಿಚಾರಣೆಯೂ ತಡವಾಗಿರುವ ಕಾರಣವನ್ನು ನೀಡಿ ರೇವಣ್ಣ ಅವರನ್ನು ಪ್ರಕರಣದಿಂದ ಕೈಬಿಟ್ಟಿದೆ.




