Belagavi NewsBelgaum NewsKannada NewsKarnataka NewsNational

*ಶ್ರೀ ರಾಮಾಯಣ ದರ್ಶನಂ ಮುಕ್ತ ಛಂದಸ್ಸಿನಲ್ಲಿ ರಚಿತವಾದ ಮಹಾಕಾವ್ಯ: ಡಾ. ಬಸವರಾಜ ಜಗಜಂಪಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮುಕ್ತ ಛಂದಸ್ಸಿನಲ್ಲಿ ರಚಿತವಾದ ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ವಾಚನದ ಮೂಲಕ  ಅವರಿಗೆ ಜನ್ಮದಿನದ ಸಂದರ್ಭದಲ್ಲಿ ಸೂಕ್ತ ಗೌರವ ಸಲ್ಲಿಸಿದಂತಾಗಿದೆ  ಎಂದು ಹಿರಿಯ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಅವರಿಂದಿಲ್ಲಿ ಹೇಳಿದರು.

ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಮತ್ತು  ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುಗಳು   ಕುವೆಂಪು ಅವರ ೧೨೧ ನೇ ಜನ್ಮದಿನದ  ನಿಮಿತ್ತ  ಏರ್ಪಡಿಸಿದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದ ಜಗಜಂಪಿಯವರು ಶಬರಿ ಮತ್ತು ಶ್ರೀರಾಮನ ನಡುವಿನ ಮಾನವೀಯ ಸಂಬಂಧದ ಹೃದ್ಯ ಚಿತ್ರಣವನ್ನು ಮಹಾಕವಿ ಕುವೆಂಪು ಅವರು ಕಟ್ಟಿಕೊಟ್ಟ ರೀತಿಯೇ ಅನನ್ಯವಾಗಿದ್ದು ಅದನ್ನು ಗಮಕ ವಾಚನ ವ್ಯಾಖ್ಯಾನದ ಮೂಲಕ ಶಾಸ್ತ್ರಿ ಮತ್ತು ಕೋಲಕಾರ ಅವರು ರಸಮಯವಾಗಿ  ನಮಗೆ ಉಣಬಡಿಸಿದ್ದಾರೆ. ಕುವೆಂಪು ಅವರು ಒಂಬತ್ತು ವರ್ಷಗಳ ಕಾಲ ರಚಿಸಿದ ಮಹಾಕಾವ್ಯ ಇದು. ಇಂಥ ಒಂದು ಅಪರೂಪದ ಕಾರ್ಯಕ್ರಮಕ್ಕೆ ಬಾರದ ಕನ್ನಡ ಅಧ್ಯಾಪಕರುಗಳ ಕುರಿತು ಅವರು ಖೇದ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಎಲ್. ಎಸ್.  ಶಾಸ್ತ್ರಿ ಅವರು ಗಮಕ ಶೈಲಿಯಲ್ಲಿ “ಶಬರಿಗಾದನು ಅತಿಥಿ ದಾಶರಥಿ”ಎಂಬ ಕಾವ್ಯಭಾಗವನ್ನು ಹಾಡಿದರು ಮತ್ತು ಪ್ರಾಧ್ಯಾಪಕ ಡಾ. ಹರೀಶ ಬಿ. ಕೋಲಕಾರ ಅವರು ಅದಕ್ಕೆ ಅರ್ಥಪೂರ್ಣವಾದ ವಿವರಣೆಯಿತ್ತರು. ಸಾರಸ್ವತ ಲೋಕದ ಇಬ್ಬರು ದಿಗ್ಗಜರು “ಶಬರಿಗಾದನು ಅತಿಥಿ ದಾಸರಥಿ” ಪ್ರಸಂಗವನ್ನು ಕಣ್ಣ ಮುಂದೆ ತಂದಿಟ್ಟರು. ಕಾರ್ಯಕ್ರಮ ನೆರೆದ ಪ್ರಬುದ್ಧ  ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪಾತ್ರವಾಯಿತು. ಇದು ಈವರೆಗಿನ ಬೆಳಗಾವಿಯಲ್ಲಿ ನಡೆದ ಎರಡನೆಯ ಗಮಕವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಇದೆಂದು ಹಿರಿಯರಾದ ಪಿ.ಬಿ. ಸ್ವಾಮಿ ಹೇಳಿದರು.

ಜಿಲ್ಲಾ ಚುಸಾಪ ಕಾರ್ಯದರ್ಶಿ ಬಸವರಾಜ ಗಾರ್ಗಿ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಶೆಖರ ನವಲಗುಂದ ವಂದಿಸಿದರು. ವಿಶ್ವಸ್ತ ಮಂಡಳಿ ಗೌರವ ಕಾರ್ಯದರ್ಶಿ ಆರ್. ಬಿ.ಕಟ್ಟಿ , ಚುಸಾಪ ಕಾರ್ಯಾಧ್ಯಕ್ಷ ಡಾ. ಸಿ.ಕೆ. ಜೋರಾಪುರ ವೇದಿಕೆಯಲ್ಲಿದ್ದರು. ಡಾ. ಎಚ್. ಬಿ. ರಾಜಶೇಖರ,  ಡಾ. ರಾಮಕೃಷ್ಣ ಮರಾಠೆ, ಶಿರೀಷ ಜೋಶಿ , ಡಾ. ಅರವಿಂದ ಕುಲಕರ್ಣಿ , ಡಾ. ಪದ್ಮಾ ಕುಲಕರ್ಣಿ,  ಶ್ರೀರಂಗ ಜೋಶಿ, ಮುರುಗೇಶ ಶಿವಪೂಜಿ,  ಪ್ರೊ. ಎಮ್.ಎಸ್. ಇಂಚಲ, ಪ್ರೊ. ಇಂದಿರಾ ಹೋಳಕರ, ರೇಖಾ ದೇಸಾಯಿ, ಮೊದಲಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button