*3 ವಿಷಯಗಳ ಬಗ್ಗೆ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ: ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಜನೆವರಿ 5ರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಹೋರಾಟದ ರೂಪುರೇಷೆ ತೀರ್ಮಾನಿಸಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಅಕ್ರಮ ವಲಸಿಗರಿಗೆ ಮನೆ ನೀಡುತ್ತಿರುವುದನ್ನು ವಿರೋಧಿಸಿ, ಡ್ರಗ್ಸ್ ಮಾಫಿಯಾ ಮಿತಿ ಮೀರುತ್ತಿರುವ ಕುರಿತು ಹಾಗೂ ಗೃಹಲಕ್ಷ್ಮೀ ಹಣವನ್ನು ಫಲಾನುಭವಿಗೆ ಹಾಕುವ ಕುರಿತು ಉಗ್ರ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಹೈಕಮಾಂಡ್ ಗೆ ಹೆದರಿಕೊಂಡು, ತಮ್ಮ ಮುಖ್ಯಮಂತ್ರಿ ಖುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಯಾವುದೇ ನಿಯಮಗಳನ್ನು ಪಾಲಿಸದೆ ಅಕ್ರಮ ವಲಸಿಗರಿಗೆ ಮನೆಗಳನ್ನು ನೀಡುವುದು ಕಾನೂನಿಗೆ ವಿರುದ್ಧವಾದದ್ದು. ಸರಕಾರದ ನಿರ್ಧಾರ ಅಕ್ರಮವಾದದ್ದು. ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಅವರು ಹರಿಹಾಯ್ದರು.
ಕಬ್ಬು ಬೆಳೆಗಾರರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರೂ ಮುಖ್ಯಮತ್ರಿಗಳು ನ್ಯಾಯ ಒದಗಿಸಿಲ್ಲ. ಪ್ರಧಾನಿಗೆ ಪತ್ರ ಬರೆದಿದ್ದೊಂದೇ ಅವರ ದೊಡ್ಡ ಸಾಧನೆ ಎಂದರು.
ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ಮಿತಿ ಮೀರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಪೊಲೀಸರು ಬಂದು ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ರಾಜ್ಯ ಸರಕಾರ ಏನು ಮಾಡುತ್ತಿದೆ, ಪೊಲೀಸರು ಏನು ಮಾಡುತ್ತಿದ್ದಾರೆ, ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಪ್ರಶ್ನಿಸಿದರು.
ರಾಜ್ಯ ಸರಕಾರ ಡ್ರಗ್ಸ್ ಮಾಫಿಯಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಲ್ಲಿ ಏನಾಗಬೇಕೆನ್ನುವುದು ದೆಹಲಿಯಲ್ಲಿ, ಕೇರಳದಲ್ಲಿ ತೀರ್ಮಾನವಾಗುತ್ತಿದೆ. ಸರಕಾರಕ್ಕೆ ಸ್ವಾತಂತ್ರ್ಯವೇ ಇಲ್ಲ. ಗೃಹ ಸಚಿವರು ಅಸಹಾಯಕರಾಗಿದ್ದಾರೆ. ಅಸಮರ್ಥ ಗೃಹ ಸಚಿವರಿದ್ದಾರೆ. ಈ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.
ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲದೆ ಕುಡುಕರ ರಾಜ್ಯ ಮಾಡಲಾಗುತ್ತಿದೆ. ಸರಕಾರದ ಖಜಾನೆಗೆ ಹಣ ಬರಬೇಕು ಎಂದು ಎಲ್ಲೆಡೆ ಮದ್ಯದ ಅಂಗಡಿ ತೆರೆಯಲಾಗುತ್ತಿದೆ. ಕುಡಿತದಿಂದ ಯಾವ ರೀತಿ ಅನ್ಯಾಯವಾಗುತ್ತಿದೆ. ಅನಾನುಕೂಲವಾಗುತ್ತಿದೆ ಎನ್ನುವ ಚಿಂತೆ ಸರಕಾರಕ್ಕಿಲ್ಲ . ಇತಿಹಾಸದಲ್ಲೇ ಇಂತಹ ಸರಕಾರ ನೋಡಿಲ್ಲ ಎಂದರು.
ಇದರ ಜೊತೆಗೆ, ಬಾಕಿ ಇರುವ ಗೃಹಲಕ್ಷ್ಮೀ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಬೇಕೆಂದು ಆಗ್ರಹಿಸಿ ಸಹ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರಾಜ್ಯದ ಹಿತಾಸಕ್ತಿ ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ. ಅಸಮರ್ಥ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ. ರಾಜ್ದ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗಿದೆ. ಜ. 5ರಂದು ಕೋರ್ ಕಮಿಟಿ ಸಭೆ ನಡೆಯಲಿದ್ದು ಅಂದು ಹೋರಾಟದ ಕುರಿತು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಶಾಸಕರಾದ ಅಭಯ ಪಾಟೀಲ, ನಿಖಿಲ ಕತ್ತಿ, ಮುಖಂಡರಾದ ಎಂ.ಬಿ.ಜಿರಲಿ, ಸುಭಾಷ ಪಾಟೀಲ, ಅನಿಲ ಬೆನಕೆ, ಡಾ.ರವಿ ಪಾಟೀಲ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿದ್ದರು.



