Kannada NewsKarnataka NewsPolitics

*ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು: ಸಿ.ಎಂ ಸಿದ್ದರಾಮಯ್ಯ* 

ಪ್ರಗತಿವಾಹಿನಿ ಸುದ್ದಿ: ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು.ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. 

ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. 

ನಾರಾಯಣ ಗುರುಗಳು ಕೇವಲ‌ ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು ಎಂದರು. 

ಇದೇ ನಾರಾಯಣ ಗುರುಗಳು ಕಂಡ ಭಾರತ. ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂಥಾ ಭಾರತವನ್ನು ನಾವು ಒಟ್ಟಾಗಿ ಗಟ್ಟಿಗೊಳಿಸಬೇಕಿದೆ ಎಂದರು. 

Home add -Advt

ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ,ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಮೆಚ್ಚುಗೆ ಸೂಚಿಸಿದರು.‌

ರಾಜಕಾರಣ ನೈತಿಕತೆಯಿಂದ ದೂರವಾಗುತ್ತಾ,  ಧರ್ಮವು ನೈತಿಕತೆಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಆಯುಧವಾಗುತ್ತಿರುವ ಅಪಾಯದ ದಿನಗಳಲ್ಲಿ ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ಆದರ್ಶವಾಗಬೇಕು.ಶಿವಗಿರಿ ಮಠ ‘ಜೀವಂತ ಸಂವಿಧಾನ’ದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು. 

ಶಿವಗಿರಿ ತೀರ್ಥಯಾತ್ರೆಯು ಭಾರತದ ಮೂಲ ‘ಕೋಮು-ವಿರೋಧಿ’ ಯೋಜನೆಯಾಗಿದೆ. ಸಮಾಜವು ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿಯು ಪ್ರಾಬಲ್ಯಕ್ಕಿಂತ ‘ಸಂವಾದ’ವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ ‘ಸಮಾನತೆ’ಯನ್ನು ಮತ್ತು ಸಾಂಕೇತಿಕತೆಗಿಂತ ‘ನೈತಿಕತೆ’ಯನ್ನು ಎತ್ತಿ ಹಿಡಿಯುತ್ತದೆ ಎಂದರು. 

“ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ” ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು.

ನಾರಾಯಣ ಗುರುಗಳು ಅನ್ಯಾಯದ ಚೌಕಟ್ಟಿನೊಳಗೆ ಸುಧಾರಣೆಯನ್ನು ಬಯಸಲಿಲ್ಲ. ಅವರು ಅನ್ಯಾಯದ ಬೇರುಗಳನ್ನೇ ಕಿತ್ತೆಸೆದರು.

ಕೇರಳವು ಜಾತಿ ತಾರತಮ್ಯ, ಮೌಢ್ಯಾಚರಣೆ ಮತ್ತು ಅಸಮಾನತೆಯಿಂದ ಉಸಿರುಗಟ್ಟುತ್ತಿದ್ದಾಗ,  “ಮಾನವಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಸತ್ಯವನ್ನು ಘೋಷಿಸಿದರು.

ಇದು ಕೇವಲ ಕಾವ್ಯಾತ್ಮಕ ಹೇಳಿಕೆಯಲ್ಲ. ಇದು ಜಾತಿ ತಾರತಮ್ಯ ಸೋಂಕಿನ ಮನುಸ್ಮೃತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆ, ಧಾರ್ಮಿಕ ಏಕಸ್ವಾಮ್ಯತೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ನೀಡಿದ ನೇರ ಸವಾಲಾಗಿತ್ತು‌ ಎಂದರು. 

ನಾರಾಯಣ ಗುರುಗಳ ತತ್ವಜ್ಞಾನವು ಕನ್ನಡದ ರಾಷ್ಟ್ರಕವಿ ಕುವೆಂಪು ಅವರು ನಂತರ ಪ್ರತಿಪಾದಿಸಿದ ‘ವಿಶ್ವಮಾನವ’ ಪರಿಕಲ್ಪನೆಯನ್ನು ಒಳಗೊಂಡಿತ್ತು. ಇದು ಜಾತಿರಹಿತ, ಭಯರಹಿತ ಮತ್ತು ಮಾನವೀಯ ಸಮಾಜ ನಿರ್ಮಾಣದ ದೂರದೃಷ್ಟಿಯಾಗಿತ್ತು.

ಹಿಂದುಳಿದ ಸಮುದಾಯಗಳು ತಮ್ಮದೇ ಆದ ದೇವಾಲಯಗಳನ್ನು ಸ್ಥಾಪಿಸಬೇಕೆಂದು ಕರೆ ನೀಡಿ, ದೇವಾಲಯಗಳಲ್ಲಿ ವಿಗ್ರಹದ ಬದಲು ಕನ್ನಡಿಯನ್ನು ಪ್ರತಿಷ್ಠಾಪಿಸಿದರು. ದೈವತ್ವವು ಪ್ರತಿ ಮನುಷ್ಯನೊಳಗೆ ನೆಲೆಸಿದ್ದು, ಆತ್ಮಸಾಕ್ಷಾತ್ಕಾರ, ಸಮಾನತೆ ಹಾಗೂ ಯಾರಿಗೂ ಕೇಡು ಬಯಸದಿರುವುದೇ ನಿಜವಾದ ಆರಾಧನೆ ಎಂದು ತಿಳಿಸುವುದು ಇದರ ಉದ್ದೇಶವಾಗಿತ್ತು.

ಶಾಲೆಗಳು, ದೇವಾಲಯಗಳು ಮತ್ತು ಸಾಮಾಜಿಕ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ, ನಾರಾಯಣ ಗುರುಗಳು ಶೋಷಿತರಿಗೆ ಸ್ವಾಭಿಮಾನ, ಜ್ಞಾನ ಮತ್ತು ನಾಯಕತ್ವದ ಗುಣವನ್ನು ಮರುಸ್ಥಾಪಿಸುವ ವೇದಿಕೆಯನ್ನು ಸೃಷ್ಟಿಸಿದರು.

ಜಾತಿ ಎನ್ನುವುದು ಕೇವಲ ಆಚರಣೆಗಳಿಂದಲ್ಲ, ಜ್ಞಾನದ ವ್ಯವಸ್ಥಿತ ನಿರಾಕರಣೆಯಿಂದ ಜೀವಂತವಾಗಿರುವುದನ್ನು ಅವರು ಅರ್ಥಮಾಡಿಕೊಂಡಿದ್ದರು. ಅವರ ಪ್ರಕಾರ, ಅಜ್ಞಾನವು ಆಕಸ್ಮಿಕವಲ್ಲ, ಅದು ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಉಳಿವಿಗಾಗಿ ಮಾಡಿದ ರಾಜಕೀಯ ಉದ್ದೇಶದ ಸೃಷ್ಠಿಯಾಗಿತ್ತು ಎಂದರು. 

“ಶಿಕ್ಷಣದ ಮೂಲಕ ವಿಮೋಚನೆ, ಸಂಘಟನೆಯ ಮೂಲಕ ಸಬಲೀಕರಣ” ಎಂಬ ಅವರ ಮೂಲ ನಂಬಿಕೆಯು ಕೇವಲ ಘೋಷಣೆಯಾಗಿರದೆ, ಸಾಮಾಜಿಕ ಪರಿವರ್ತನೆಯ ಸಿದ್ಧಾಂತವಾಗಿತ್ತು.

ಆಧುನಿಕ ರಾಷ್ಟ್ರಗಳು ‘ಮಾನವ ಶಕ್ತಿ’ಯ ಬಗ್ಗೆ ಮಾತನಾಡುವ ಮೊದಲೇ, ಉದ್ದೇಶಪೂರ್ವಕ ಅಸಮಾನತೆಯನ್ನು ಹೋಗಲಾಡಿಸಲು ಶಿಕ್ಷಣವೇ ಪ್ರಬಲ ಅಸ್ತ್ರ ಎಂದು ನಾರಾಯಣ ಗುರುಗಳು ವಾದಿಸಿದ್ದರು.

ನಾರಾಯಣ ಗುರುಗಳು ಐಟಿಐ (ITI)ಗಳನ್ನು ಸ್ಥಾಪಿಸಿದರು, ಕೈಗಾರಿಕಾ ಪ್ರದರ್ಶನಗಳನ್ನು ಆಯೋಜಿಸಿದರು ಮತ್ತು ಹಿಂದುಳಿದ ಸಮುದಾಯಗಳು ಅವಲಂಬಿತರಾಗದೆ ಉತ್ಪಾದಕರಾಗಬೇಕು ಎಂದು ಪ್ರೇರೇಪಿಸಿದರು.

ಸ್ವಾಭಿಮಾನದ ಉದ್ಯೋಗಕ್ಕಾಗಿ ಕೈಗಾರಿಕಾ ತರಬೇತಿ, ಕೌಶಲ ಅಭಿವೃದ್ಧಿ ಮತ್ತು ಆಧುನಿಕ ಕೃಷಿ ಕಾರ್ಯಾಗಾರಗಳನ್ನು ಗುರುಗಳು ಉತ್ತೇಜಿಸಿದರು.

ಅವರ ಈ ಚಳವಳಿಯು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕರಾವಳಿಯಾದ್ಯಂತ ಕೈಗಾರಿಕಾ ಮತ್ತು ಉದ್ಯಮಶೀಲ ಸಮುದಾಯಗಳ ಉದಯಕ್ಕೆ ನೇರವಾಗಿ ಕಾರಣವಾಯಿತು.

ನಾರಾಯಣ ಗುರುಗಳು ಉದ್ಯೋಗ ಮತ್ತು ಕೈಗಾರಿಕೆಯನ್ನು ಸಂಸ್ಕೃತಿ ಅಥವಾ ಆಧ್ಯಾತ್ಮಿಕತೆಗೆ ಅಪಾಯವೆಂದು ಪರಿಗಣಿಸಲಿಲ್ಲ. ಬದಲಾಗಿ ಅವುಗಳನ್ನು ಸಾಮಾಜಿಕ ವಿಮೋಚನೆಯ ಸಾಧನಗಳಾಗಿ ಕಂಡರು.

ಉತ್ಪಾದನಾ ಶ್ರಮದ ಬಗೆಗಿನ ಅವರ ಆಸ್ಥೆಯು ಪ್ರಗತಿ ವಿರೋಧಿ ಮತ್ತು ಸಂಕುಚಿತ ಆರ್ಥಿಕ ಚಿಂತನೆಗಳಿಗೆ ನೇರ ವಿರೋಧ ಒಡ್ಡಿತ್ತು.

ನಾರಾಯಣ ಗುರುಗಳು ಶಿಕ್ಷಣವನ್ನು ಉತ್ತೇಜಿಸುವ ಮೂಲಕ, ಅನಿಷ್ಟ ಪದ್ಧತಿಗಳನ್ನು ವಿರೋಧಿಸುವ ಮೂಲಕ ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದರು. ಮಹಿಳೆಯರ ಘನತೆ ಮತ್ತು ಸಮಾನ ಅವಕಾಶವಿಲ್ಲದೆ ಸಾಮಾಜಿಕ ನ್ಯಾಯ ಅಸಾಧ್ಯ ಎಂದು ಸಾರಿದರು. ಶಾಲೆಗಳು, ಗ್ರಂಥಾಲಯಗಳು, ಸಾಮಾಜಿಕ ಸುಧಾರಣಾ ಅಭಿಯಾನಗಳು ಮತ್ತು ಕೃಷಿ-ಕೈಗಾರಿಕಾ ಕಾರ್ಯಾಗಾರಗಳನ್ನು ಸಾಂಸ್ಥಿಕಗೊಳಿಸಿದರು.

ಇದು ಆಧುನಿಕ ಸಮಾಜಶಾಸ್ತ್ರವು ಯಾವುದನ್ನು ‘ಸಾಮಾಜಿಕ ಬಂಡವಾಳ’ ಎಂದು ಕರೆಯುತ್ತದೆಯೋ, ಅದನ್ನು ಗುರುಗಳು, ಪರಸ್ಪರ ನಂಬಿಕೆಯ ಹಾಗೂ ಸಂಘಟಿತ ಹೋರಾಟದ ಮೂಲಕ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವುದು ಅಗತ್ಯವೆಂದು ತಿಳಿಸಿದರು.

ನಾರಾಯಣ ಗುರುಗಳ ಪ್ರಭಾವ ಕೇರಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 1925ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ ಅವರು ನಡೆಸಿದ ಐತಿಹಾಸಿಕ ಸಂವಾದವು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. “ಜಾತಿ ಎನ್ನುವುದು ಸಾಂಸ್ಕೃತಿಕ ವೈವಿಧ್ಯತೆಯಲ್ಲ, ಅದು ಸಾಂಸ್ಥಿಕ ಅನ್ಯಾಯ” ಎಂಬ ಮೂಲಭೂತ ಸತ್ಯವನ್ನು ಗಾಂಧೀಜಿಯವರು ಅರಿತುಕೊಳ್ಳುವಂತೆ ಮಾಡಿತು.

ಮಾವಿನ ಮರದ ಎಲೆಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಾರ ಒಂದೇ ಎಂಬ ಉದಾಹರಣೆಯ ಮೂಲಕ, ಜಾತಿ ಮತ್ತು ಧರ್ಮಗಳು ಜಗತ್ತಿನ ಆಳವಾದ ಸಾಮಾಜಿಕ ಸಮಸ್ಯೆಗಳೇ ಹೊರತು ವೈವಿಧ್ಯತೆಯಲ್ಲ ಎಂದು ಗಾಂಧೀಜಿಯವರಿಗೆ ಮನವರಿಕೆ ಮಾಡಿಕೊಟ್ಟರು.

ನಾರಾಯಣ ಗುರುಗಳನ್ನು ಭೇಟಿಯಾದ ನಂತರವೇ ಗಾಂಧೀಜಿಯವರು ಅಸ್ಪೃಶ್ಯತೆ, ಸರಳತೆ ಮತ್ತು ಅಂತರ್ಜಾತಿ ವಿವಾಹಗಳ ಬಗ್ಗೆ ತಮ್ಮ ನಿಲುವನ್ನು ಗಟ್ಟಿಗೊಳಿಸಿದರು. ಅಂತರ್ಜಾತಿ ವಿವಾಹವಲ್ಲದ ಮದುವೆಗಳಿಗೆ ತಾವು ಹಾಜರಾಗುವುದಿಲ್ಲ ಎಂದು ಗಾಂಧೀಜಿಯವರು ನಿರ್ಧರಿಸಿದ್ದು ಕಾಕತಾಳೀಯವಲ್ಲ ಎಂದು ಮುಖ್ಯಮಂತ್ರಿಗಳು ವಿವರಿಸಿದರು. 

ಮುಖ್ಯಮಂತ್ರಿಗಳ ಭಾಷಣದ ಇತರೆ ಹೈಲೈಟ್ಸ್ ಗಳು.

ರವೀಂದ್ರನಾಥ ಟ್ಯಾಗೋರ್ ಅವರ ನೈತಿಕ ಮತ್ತು ಸೈದ್ಧಾಂತಿಕ ನಾರಾಯಣ ಗುರುಗಳು ಪ್ರಭಾವಿಸಿದರು. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವುದು ದೊಡ್ಡ ಅನ್ಯಾಯ ಎಂದು ಟ್ಯಾಗೋರ್ ಒಪ್ಪಿಕೊಂಡರು. ಟ್ಯಾಗೋರ್ ಅವರ ‘ವಿಶ್ವಮಾನವ’ (Universal Man) ಪರಿಕಲ್ಪನೆಗೆ ನಾರಾಯಣ ಗುರುಗಳ ಚಿಂತನೆಗಳೇ ಸ್ಫೂರ್ತಿ.

ಹೀಗೆ ನಾರಾಯಣ ಗುರುಗಳು ಆಧ್ಯಾತ್ಮಿಕತೆ, ವೈಚಾರಿಕತೆ, ಮಾನವತಾವಾದ ಮತ್ತು ಸಾಮಾಜಿಕ ನ್ಯಾಯವನ್ನು ಬೆಸೆಯುವ ಮೂಲಕ ಆಧುನಿಕ ಭಾರತದ ಸೈದ್ಧಾಂತಿಕ ಹಾದಿಯನ್ನು ನಿರ್ಮಿಸಿದರು. ಜಾತಿ ಮಾಯವಾಗಿಲ್ಲ, ಅದು ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಕೋಮುವಾದವು ಈಗ ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ; ಅದು ಗುರುತು, ಭಯ ಮತ್ತು ಅಹಂಕಾರದ ಭಾಷೆಯಲ್ಲಿ ಮಾತನಾಡುತ್ತಿದೆ. ನಾರಾಯಣ ಗುರುಗಳು ಈ ಅಪಾಯವನ್ನು ಮುನ್ಸೂಚಿಸಿದ್ದರು. ಧರ್ಮವು ಕರುಣೆ ಮತ್ತು ನೈತಿಕತೆಯಿಂದ ದೂರವಾದಾಗ, ಅದು ಕೇವಲ ಅಧಿಕಾರ ಚಲಾಯಿಸುವ ಸಾಧನವಾಗುತ್ತದೆ ಎಂದು ಅವರು ಅರ್ಥಮಾಡಿಕೊಂಡಿದ್ದರು.

ಧಾರ್ಮಿಕ ಬಹುಸಂಖ್ಯಾತವಾದ, ನ್ಯಾಯ ಮತ್ತು ಸಮಾನತೆಯಿಲ್ಲದ ಯಾವುದೇ ರಾಷ್ಟ್ರೀಯತೆ ಅಥವಾ ರಾಜಕೀಯವು ಮನುಕುಲಕ್ಕೆ ಶಾಪ ಎಂದು ಗುರುಗಳು ಎಚ್ಚರಿಸಿದ್ದರು. ಸಾಮಾಜಿಕ ನ್ಯಾಯವಿಲ್ಲದ ರಾಷ್ಟ್ರ ನಿರ್ಮಾಣವು ಕೇವಲ ಆಡಳಿತಾತ್ಮಕ ವ್ಯವಸ್ಥೆಯಾಗಲಿದೆಯೇ ಹೊರತು ಪ್ರಜಾಪ್ರಭುತ್ವವಾಗುವುದಿಲ್ಲ ಎಂದ ಅವರ ಸಂದೇಶ ಸಾರಿದ್ದರು. ಕೇರಳದಲ್ಲಿ ನೆಲೆಸಿದ್ದರೂ, ನಾರಾಯಣ ಗುರುಗಳ ಪ್ರಭಾವವು ಭಾಷೆ ಮತ್ತು ರಾಜ್ಯದ ಗಡಿಗಳನ್ನು ಮೀರಿ ಕರ್ನಾಟಕದ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಲೆನಾಡು ಭಾಗಗಳಲ್ಲಿ ಸುಧಾರಣಾ ಚಳವಳಿಗಳನ್ನು ರೂಪಿಸಿತು.

ಕರ್ನಾಟಕ ಕರಾವಳಿಯ ಬಿಲ್ಲವ, ಈಡಿಗ, ಮೊಗವೀರ ಮತ್ತು ಇತರ ಹಿಂದುಳಿದ ಸಮುದಾಯಗಳು ನಾರಾಯಣ ಗುರುಗಳ ಸ್ವಾಭಿಮಾನ, ಶಿಕ್ಷಣ ಮತ್ತು ಸಂಘಟನೆಯ ಕರೆಯಿಂದ ಸ್ಫೂರ್ತಿ ಪಡೆದವು. ಇದು ಈ ಪ್ರದೇಶದಲ್ಲಿ ಕೋಮು ಶಕ್ತಿಗಳ ವಿಭಜನೆಯ ಪ್ರಯತ್ನಗಳಿಗೆ ಬಲವಾದ ಪ್ರತಿರೋಧವನ್ನು ಒಡ್ಡಲು ಪ್ರಮುಖ ಕಾರಣವಾಗಿದೆ. ಬಸವಣ್ಣನವರ ‘ಕಾಯಕ’ ತತ್ವವು ನಾರಾಯಣ ಗುರುಗಳ ಆರ್ಥಿಕ ಸ್ವಾವಲಂಬನೆಯ ಚಿಂತನೆಯಲ್ಲಿ ಪ್ರತಿಧ್ವನಿಸುತ್ತದೆ. ಬಸವಣ್ಣನವರು ವಚನಗಳ ಮೂಲಕ ಭಕ್ತಿಯನ್ನು ಜನಸಾಮಾನ್ಯರ ಕೈಗೆ ನಿಲುಕುವಂತೆ ಮಾಡಿದರೆ, ನಾರಾಯಣ ಗುರುಗಳು ದೈವತ್ವವನ್ನೇ ಎಲ್ಲರಿಗೂ ಹಂಚುವ ಮೂಲಕ ಮನುಷ್ಯರು ಹುಟ್ಟಿನಿಂದ ಮೇಲುಕೀಳಲ್ಲ, ಅಸ್ತಿತ್ವದಿಂದ ಸಮಾನರು ಎಂದು ಸಾರಿದರು.

ಅವರಿಬ್ಬರೂ ಧರ್ಮವನ್ನು ಬಹಿಷ್ಕಾರದ ಸಾಧನದಿಂದ ಸಾಮಾಜಿಕ ನ್ಯಾಯದ ಭಾಷೆಯನ್ನಾಗಿ ಪರಿವರ್ತಿಸಿದರು. ಕರ್ನಾಟಕ ಸರ್ಕಾರವು ಸಮಾನತೆ ಮತ್ತು ಮಾನವ ಘನತೆಯನ್ನು ಆದ್ಯತೆಯಾಗಿಸುವ ಮೂಲಕ ನಾರಾಯಣ ಗುರುಗಳ ಆದರ್ಶಗಳನ್ನು ಮುಂದುವರಿಸುತ್ತಿದೆ. 2016ರಲ್ಲಿ ‘ನಾರಾಯಣ ಗುರು ಜಯಂತಿ’ಯನ್ನು ಘೋಷಿಸುವ ಮೂಲಕ, ಅವರ ಸಾಮಾಜಿಕ ಸಾಮರಸ್ಯದ ಸಂದೇಶವು ಕರ್ನಾಟಕದ ಮೂಲೆ ಮೂಲೆಗೂ ತಲುಪುವಂತೆ ಮಾಡಲಾಗುತ್ತಿದೆ.

ಅವರ ಬರವಣಿಗೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗುತ್ತಿದೆ, ಈ ಮೂಲಕ ನಾವು ಜ್ಞಾನವನ್ನು ಎಲ್ಲರಿಗೂ ಮುಕ್ತಗೊಳಿಸಿ, ಜನರಲ್ಲಿ ವಿಮರ್ಶಾತ್ಮಕ ಪ್ರಜ್ಞೆಯನ್ನು ಜಾಗೃತಗೊಳಿಸಲಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ’ವನ್ನು ಸ್ಥಾಪಿಸುವ ಮೂಲಕ ಅವರ ಪರಂಪರೆಯನ್ನು ಗಟ್ಟಿಗೊಳಿಸಲು 2013 ರಲ್ಲಿ ₹1 ಕೋಟಿ ಮತ್ತು 2023 ರಲ್ಲಿ ಹೆಚ್ಚುವರಿ ₹22 ಕೋಟಿ ಅನುದಾನವನ್ನು ನೀಡಲಾಗಿದೆ. ಹುಟ್ಟು ಎಂದಿಗೂ ಮನುಷ್ಯನ ಭವಿಷ್ಯವನ್ನು ನಿರ್ಧರಿಸಬಾರದು ಎಂಬ ಗುರುಗಳ ನಂಬಿಕೆಯಲ್ಲಿ ಇಟ್ಟಿರುವ ಈ ಹೆಜ್ಜೆಗಳು, ಸಾಮಾಜಿಕ ನ್ಯಾಯದ ಕುರಿತ ಕರ್ನಾಟಕದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ನಾನು ಧಾರ್ಮಿಕ ಮುಖಂಡರಿಗೆ ದ್ವೇಷದ ವಿರುದ್ಧ ಧ್ವನಿಯೆತ್ತಲು ಹಾಗೂ ವಿದ್ವಾಂಸರಿಗೆ ನಾರಾಯಣ ಗುರುಗಳ ತತ್ವಜ್ಞಾನವನ್ನು ತರಗತಿಗಳಿಗೆ ಕೊಂಡೊಯ್ಯಲು ಕರೆ ನೀಡುತ್ತೇನೆ. ಯುವಜನತೆಯು ಅನ್ಯಾಯವನ್ನು ಪ್ರಶ್ನಿಸಲು ಮತ್ತು ರಾಜಕೀಯ ಸಂಸ್ಥೆಗಳು ನೈತಿಕ ಮೌಲ್ಯಗಳೊಂದಿಗೆ ಆಡಳಿತ ನಡೆಸುವಂತೆ ಕರೆ ನೀಡುತ್ತೇನೆ.

ವಿಭಜನೆಯ ರಾಜಕೀಯವನ್ನು ತಿರಸ್ಕರಿಸಿ, ಘನತೆಯ ರಾಜಕೀಯವನ್ನು ಸ್ವಾಗತಿಸೋಣ. ದ್ವೇಷವು ದ್ವೇಷವನ್ನು ಹೆಚ್ಚಿಸುತ್ತದೆ, ಮೌನವು ಅನ್ಯಾಯವನ್ನು ಸಮರ್ಥಿಸುತ್ತದೆ ಮತ್ತು ಸಂವಾದವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ನೆನಪಿಡೋಣ. ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಸಂವಾದವು ನಮಗೆ ಧೈರ್ಯ, ಸ್ಪಷ್ಟತೆ ಮತ್ತು ಆತ್ಮಶಕ್ತಿಯನ್ನು ನೀಡುತ್ತಿರಲಿ.

Related Articles

Back to top button