*ನಿಟ್ಟೆ ವಿಶ್ವವಿದ್ಯಾಲಯ ಸಂಸ್ಥಾಪಕ ವಿನಯ್ ಹೆಗ್ಡೆ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಸಂಸ್ಥಾಪಕ ಹಾಗೂ ಕುಲಾಧಿಪತಿ ವಿನಯ್ ಹೆಗ್ಡೆ (83) ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಾಪ ಸೂಚಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಶೈಕ್ಷಣಿಕವಾಗಿ ತಮ್ಮದೇ ಕೊಡುಗೆ ನೀಡಿರುವ ವಿನಯ್ ಹೆಗ್ಡೆ ಅವರ ಅಗಲಿಕೆಯಿಂದ ಓರ್ವ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಂತೆ ಆಗಿದೆ. ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ದಿ. ಕೆ.ಎಸ್. ಹೆಗ್ಡೆ ಅವರ ಎರಡನೇ ಪುತ್ರ ವಿನಯ್ ಹೆಗ್ಡೆ ಅವರು ಸ್ಥಾಪಿಸಿರುವ ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇನ್ನಿತರ ಕೋರ್ಸ್ ಗಳು ಇವೆ. ಇತ್ತೀಚೆಗೆ ನಿಟ್ಟೆ ಶಿಕ್ಷಣ ಸಂಸ್ಥೆಗೆ ಪರಿಗಣಿತ ವಿವಿ ಮಾನ್ಯತೆ ದೊರೆತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗುವಂತೆ ಮಾಡಿದ್ದರು ಎಂದು ಸಚಿವರು ತಿಳಿಸಿದ್ದಾರೆ.
ವಿನಯ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ, ಬಂಧು ಬಳಗಕ್ಕೆ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುವೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



