*ವಿಮಾನಯಾನ ಸೇವೆಗಳ ಕುರಿತು ಕೇಂದ್ರ ಸಚಿವರ ಜೊತೆ ಸಂಸದ ಶೆಟ್ಟರ್ ಚರ್ಚೆ*

ಬೆಳಗಾವಿ: ಬೆಳಗಾವಿಗೆ ವಿಮಾನಯಾನ ಸೇವೆಯನ್ನು ಒದಗಿಸುವ ಕುರಿತು ಕೇಂದ್ರ ಸಚಿವ ಕೆ. ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಸಂಸದ ಜಗದೀಶ ಶೆಟ್ಟರ್ ಮನವಿ ಮಾಡಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಹಾಗೂ ಪ್ರಮುಖ ನಗರಗಳಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸಪ್ರೆಸ್ ಸಂಸ್ಥೆಯ ವತಿಯಿಂದ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಚರ್ಚಿಸಿ, ಮನವಿಯನ್ನು ಅರ್ಪಿಸಿದರು.
ಅನೇಕ ನಗರಗಳಿಗೆ ಈ ಮೊದಲು ಒದಗಿಸಲಾಗುತ್ತಿದ್ದ ವಿಮಾನಯಾನ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ರದ್ದು ಪಡಿಸಿದ್ದು, ಇದರಿಂದಾಗಿ ಉದ್ಯಮದಾರರಿಗೆ ಹಾಗೂ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ನಗರಗಳಾದ ಮುಂಬೈ, ಚನೈ, ಸುರತ್, ಪುಣೆ ಹೀಗೆ ಹಲವು ನಗರಗಳಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಯಿಂದ ಈ ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಆಯಾ ಸಂಸ್ಥೆಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಇದೇ ವೇಳೆ ಬೆಳಗಾವಿ, ಹುಬ್ಬಳ್ಳಿ ಶಿವಮೊಗ್ಗ ಹಾಗೂ ವಿಜಯಪುರ, ವಿಮಾನ ನಿಲ್ದಾಣಗಳನ್ನು ಅನುಕ್ರಮವಾಗಿ ಕಿತ್ತೂರ ರಾಣಿ ಚನ್ನಮ್ಮ ಏರಪೋರ್ಟ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಏರಪೋರ್ಟ್, ರಾಷ್ಟ್ರಕವಿ ಡಾ: ಕೆ.ವಿ ಪುಟ್ಟಪ್ಪ (ಕುವೆಂಪು) ಏರಪೋರ್ಟ್ ಹಾಗೂ ಜಗಜ್ಯೋತಿ ಬಸವೇಶ್ವರ ಏರಪೋರ್ಟ್ ಎಂದು ಮರು ನಾಮಕರಣ ಮಾಡುವ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರಕಾರದಿಂದ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಶೀಘ್ರ ಅನುಮೋದನೆ ನೀಡುವಂತೆ ನೋಡಿಕೊಳ್ಳುವಂತೆಯೂ ಸಹ ಮನವಿ ಮಾಡಲಾಯಿತು.
ಪ್ರಸ್ತಾಪಿತ ವಿಷಯವಾಗಿ ಆದಷ್ಟು ಶೀಘ್ರ ಕ್ರಮ ಕೈಕೊಳ್ಳುವುದಾಗಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ರಾಮಮೋಹನ ನಾಯ್ಡು ಭರವಸೆಯನ್ನು ನೀಡಿರುವ ಬಗ್ಗೆ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




