
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ಜೇನುನೊಣಗಳ ದಾಳಿಯಿಂದ 20 ಪುಟ್ಟ ಮಕ್ಕಳನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಅಂಗನವಾಡಿ ಕಾರ್ಯಕರ್ತೆ ಕಾಂಚನ್ ಬಾಯಿ ಮೇಘವಾಲ್ ಅವರ ಧೈರ್ಯ ಮತ್ತು ತ್ಯಾಗ ಅಪ್ರತಿಮವಾದದ್ದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದ್ದಾರೆ.
ಮಕ್ಕಳನ್ನು ಟಾರ್ಪಾಲಿನ್ (ತಾಡಪತ್ರೆ) ಹಾಗೂ ಚಾಪೆಯ ಅಡಿಯಲ್ಲಿ ಸುರಕ್ಷಿತವಾಗಿ ಅಡಗಿಸಿ, ಸಾವಿನೊಂದಿಗಿನ ಹೋರಾಟದಲ್ಲೂ ಕರ್ತವ್ಯ ಮರೆಯದ ಅವರ ಈ ಸಾಹಸ ಇಡೀ ದೇಶಕ್ಕೆ ಮಾದರಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ, ಮಾನವೀಯತೆಯುಳ್ಳ ನಾಗರಿಕಳಾಗಿ ಅವರ ಈ ಬಲಿದಾನಕ್ಕೆ ಶಿರಬಾಗಿ ಗೌರವ ಸಲ್ಲಿಸುತ್ತೇನೆ. ಕಾಂಚನ್ ಬಾಯಿ ಅವರ ಈ ಶೌರ್ಯ ಮತ್ತು ಕರ್ತವ್ಯ ನಿಷ್ಠೆ ಎಂದಿಗೂ ಅಮರ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


