Kannada NewsKarnataka NewsLatest

*ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ,

ಬೆಂಗಳೂರು;
ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ (93 )ಅವರು ನಿಧನರಾಗಿದ್ದಾರೆ .

ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಪಿ. ರಾಮಯ್ಯ ಅವರು ವಿವಿಧ ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ ಬಾಲಜಿ ತಿಳಿಸಿದ್ದಾರೆ .

1933 ಸೆಪ್ಟೆಂಬರ್ 12 ರಂದು ಜನಿಸಿದ್ದ ರಾಮಯ್ಯ ಅವರು ಇಬ್ಬರು ಪುತ್ರರು , ಓರ್ವ ಪುತ್ರಿ ಹಾಗು ಸೊಸೆಯಂದಿರು ಹಾಗು ಮೊಮ್ಮಕಳನ್ನು ಅಗಲಿದ್ದಾರೆ .

Home add -Advt

“ದಿ ಹಿಂದೂ ” ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು .

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಯುಡಬ್ಲ್ಯೂಜೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು.
ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಅವರು ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು.

ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಮನೆಯಲ್ಲಿ (295/12/1
7 ನೇ ಮೇನ್ 16 ನೇ ಕ್ರಾಸ್) ಇಡಲಾಗುವುದು ಎಂದು ಡಾ ಬಾಲಾಜಿ ತಿಳಿಸಿದ್ದಾರೆ .

ಕೆಯುಡಬ್ಲ್ಯೂಜೆ ಸಂತಾಪ:

ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂತಾಪ ವ್ಯಕ್ತಪಡಿಸಿದೆ.

ತೊಂಬತ್ತನೇ ವಸಂತ ತುಂಬಿದ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ವತಿಯಿಂದ ರಾಮಯ್ಯ ಅವರನ್ನ ಅವರ ಮನೆಯಂಗಳದಲ್ಲಿಯೇ ದಂಪತಿಗಳ ಸಹಿತ ಗೌರವಿಸಲಾಗಿತ್ತು. ಕಳೆದ ಜನ್ಮದಿನದ ಸಂದರ್ಭದಲ್ಲೂ ಅವರ ಮನೆಯಲ್ಲಿಯೇ ಭೇಟಿ ಮಾಡಿ ಶುಭಾಶಯ ಕೋರಲಾಗಿತ್ತು ಎಂದು ನೆನಪಿಸಿಕೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಶೋಕಿಸಿದ್ದಾರೆ. ರಾಮಯ್ಯ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ತಗಡೂರು ಪ್ರಾರ್ಥಿಸಿದ್ದಾರೆ.

ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರ ನಿಧನದಿಂದ ದು:ಖಿತನಾಗಿದ್ದೇನೆ.

‘ದಿ ಹಿಂದೂ’ ಪತ್ರಿಕೆಯಲ್ಲಿ ಐದು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ರಾಮಯ್ಯ ಅವರು ನನ್ನ ಹಿತಚಿಂತಕರಾಗಿದ್ದರು. ಪತ್ರಕರ್ತರಾಗಿ ಸದಾ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಿದ್ದ ರಾಮಯ್ಯ ಅವರಲ್ಲಿದ್ದ ರಾಜಕೀಯ, ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ವಿದ್ಯಮಾನಗಳ ಜ್ಞಾನ-ಅನುಭವ ಬೆರಗುಗೊಳಿಸುತಿತ್ತು.

ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಶ್ರಮಿಸಿದ್ದರು.

ರಾಮಯ್ಯ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬದ ಸದಸ್ಯರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.

I am deeply saddened by the passing of senior journalist and former Member of the Karnataka Legislative Council, P. Ramaiah.

He was associated with The Hindu for over five decades, always working in the interest of the state. His deep knowledge of politics, history, culture and social issues was admirable. As a Member of the Legislative Council, he also worked sincerely to address the concerns of small newspapers.

I pray for his soul to rest in peace and share the sorrow of his family.

: ಹಿರಿಯ ಪತ್ರಕರ್ತ ಪಿ. ರಾಮಯ್ಯ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ

ಬೆಂಗಳೂರು:

ಹಿರಿಯ ಪತ್ರಕರ್ತರು ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ. ರಾಮಯ್ಯ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

“ಹಿರಿಯ ಪತ್ರಕರ್ತ ರಾಮಯ್ಯ ಅವರು ಪ್ರತಿಷ್ಠಿತ ದಿ ಹಿಂದೂ ಪತ್ರಿಕೆಯಲ್ಲಿ ಸುದೀರ್ಘ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮಾಧ್ಯಮ ಲೋಕ ಹಾಗೂ ಸಮಾಜಕ್ಕೆ ಅವರ ಸೇವೆ ಅನುಪಮವಾದದ್ದು.

ರಾಮಯ್ಯ ಅವರು ಅಜಾತ ಶತ್ರು. ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ನಿಸ್ವಾರ್ಥ ಸೇವೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರು, ಬಂಧುಗಳಿಗೆ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

https://x.com/dkshivakumar/status/2021280481053167835?s=46

ನಾಡಿನ ಹಿರಿಯ ಪತ್ರಕರ್ತರು, ನನ್ನ ಚಿರಕಾಲದ ಮಿತ್ರರು, ಹಿತೈಷಿಗಳು ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದ ಸುದ್ದಿ ತಿಳಿದು ಬಹಳ ನೋವುಂಟಾಯಿತು. The Hindu ಪತ್ರಿಕೆಯ ವರದಿಗಾರರಾಗಿ ಅಷ್ಟೇ ಅಲ್ಲದೆ, ಆತ್ಮೀಯ ಒಡನಾಡಿಯಾಗಿ ದಶಕಗಳ ಕಾಲದಿಂದಲೂ ನನಗೆ ಚಿರಪರಿಚಿತರು.

ಪತ್ರಕರ್ತರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಅವರು ಅಪಾರ ಸೇವೆ ಸಲ್ಲಿದ್ದಾರೆ. ಅವರ ನಿಧನದಿಂದ ಪತ್ರಿಕೋದ್ಯಮದ ದೊಡ್ಡ ಕೊಂಡಿಯೊಂದು ಕಳಚಿದೆ.
ಶ್ರೀ ರಾಮಯ್ಯನವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬದವರು, ಹಿತೈಷಿಗಳು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ.ಡಿ.ದೇವೇಗೌಡ ಹೇಳಿದ್ದಾರೆ.

ಹಿರಿಯರು, ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು.

ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ ಹಿಂದೂ ರಾಮಯ್ಯ ಎಂದೇ ಜನಪ್ರಿಯರಾಗಿದ್ದರು. ಸರಳತೆ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ವೈಯಕ್ತಿಕವಾಗಿ ಅವರು ನನಗೆ ಅತ್ಯಂತ ಆತ್ಮೀಯರು ಹಾಗೂ ಅವರ ಮೇಲೆ ಅಪಾರ ಗೌರವ ಹೊಂದಿದ್ದೆ. ಹಾಗೆಯೇ ನನ್ನ ಬಗ್ಗೆಯೂ ಅವರು ವಿಶೇಷ ಮಮತೆ, ವಾತ್ಸಲ್ಯ ಇಟ್ಟುಕೊಂಡಿದ್ದರು. ಅನೇಕ ಕಠಿಣ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಜನಸೇವೆ ಮಾಡಿ ಆ ಸದನದ ಕೀರ್ತಿ, ಹಿರಿಮೆಯನ್ನು ಹೆಚ್ಚಿಸಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ.

ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅದರಲ್ಲಿಯೂ ವಿಶೇಷವಾಗಿ ಅವರ ಧರ್ಮಪತ್ನಿ ಶ್ರೀಮತಿ ರಾಮಯ್ಯ ಅವರಿಗೆ ಮತ್ತು ಶ್ರೀಯುತರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Related Articles

Back to top button