*ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: ಪರಿಸ್ಥಿತಿ ಉದ್ವಿಗ್ನ*

ಪ್ರಗತಿವಾಹಿನಿ ಸುದ್ದಿ: ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ಮತ್ತು ಚಪ್ಪಲಿ ತೂರಿದ ಘಟನೆ ನಡೆದಿದೆ.
ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಕಲ್ಲು ತೂರಾಟ ನಡೆದಿದ್ದು ಒಬ್ಬ ನಾಗರಿಕ ಮತ್ತು ಕೆಲ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯಗೊಂಡ ಪ್ರಕಾಶ್ ಅರಕೇರಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೆರವಣಿಗೆ ವೇಳೆ ಕಲ್ಲು ಮತ್ತು ಚಪ್ಪಲಿ ತೂರಲಾಗಿದೆ. ಈ ಘಟನೆಯಿಂದ ಸ್ವಲ್ಪ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಮುಂಜಾಗ್ರತಾ ಕ್ರಮವಾಗಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ದೇವಸ್ಥಾನದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ನಡುವೆ ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ಬೆಂಕಿ ಹಚ್ಚಿದ ಘಟನೆ ಕೂಡ ನಡೆದಿದೆ. ಪೊಲೀಸರು ತಕ್ಷಣವೇ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದರು. ವ್ಯಾಪಾರಿ ಜನ್ನತಬಿ ದೊಡ್ಡಮನಿ ಅವರ ತಳ್ಳುಗಾಡಿ ಸಂಪೂರ್ಣ ಸುಟ್ಟು ಹೋಗಿದ್ದು ಅದರಲ್ಲಿ ಇದ್ದ ಹಣ ಮತ್ತು ತಕ್ಕಡಿ ಸೇರಿದಂತೆ ಹಲವು ವಸ್ತುಗಳು ಹಾನಿಗೊಳಗಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಅವರು, ಮೆರವಣಿಗೆ ಮಸೀದಿ ಬಳಿ ಬಂದಾಗ ಕಲ್ಲು ಎಸೆಯಲ್ಪಟ್ಟಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದ್ದು ತಪ್ಪಿತಸ್ಥರನ್ನು ಬಂಧಿಸಲಾಗುತ್ತದೆ ಎಂದು ಹೇಳಿದರು.
ಘಟನೆಯ ಹಿನ್ನೆಲೆಯಲ್ಲಿ ಹಳೆ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಸೇರಬಾರದು ಎಂದು ಆದೇಶ ಹೊರಡಿಸಲಾಗಿದೆ. ನಗರದಲ್ಲಿ ಹೆಚ್ಚಿನ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ಈಗ ಶಾಂತವಾಗಿದೆ.

