*ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಹೇಳಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಿಂದ ಹಣ, ಒಡವೆ ಪಡೆದು ಶಿಕ್ಷಕನಿಂದ ಮೋಸ*

ನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ
ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್. ಸಿ ವಿದ್ಯಾರ್ಥಿಯೊಬ್ಬನನ್ನು ಪಾಸ್ ಮಾಡಿಸುವುದಾಗಿ ಹೇಳಿ ಶಿಕ್ಷಕನೊಬ್ಬ ಆತನಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಧಾರವಾಡದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೊಬ್ಬ ಶಿಕ್ಷಕನ ಮಾತು ನಂಬಿ ಮೋಸ ಹೊಗಿದ್ದು, ವಿಷಯ ಪೋಷಕರಿಗೆ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಧಾರವಾಡದ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕ. 10ನೇ ತರಗತಿ ವಿದ್ಯಾರ್ಥಿಯಾಗಿರೋ ನಗರದ ಶಿವನಗರ ನಿವಾಸಿ ಅಭಿಷೇಕ್ಗೆ ಈ ಬಾರಿಯ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ನಂಬಿಸಿದ್ದಾನೆ. ಪ್ರಶ್ನೆ ಪತ್ರಿಕೆಗಳನ್ನ ಲೀಕ್ ಮಾಡಿ ಕೊಡುತ್ತೇನೆ ಅಂತ ನಂಬಿಸಿ ವಿದ್ಯಾರ್ಥಿಗೆ ಹಣದ ಬೇಡಿಕೆ ಇಟ್ಟಿದ್ದಾನೆ.
ನನ್ನ ಮಗನ ಕಾಲೇಜಿನ ಫೀಸ್ ಕಟ್ಟಬೇಕು. ನಿಮ್ಮ ಮನೆಯ ಬಂಗಾರವನ್ನು ತಂದು ಕೊಡು ಅಂತ ಹೇಳಿದ್ದಾನೆ. ಅದಕ್ಕೆ ಮೊದಲು ಒಪ್ಪದ ವಿದ್ಯಾರ್ಥಿ ಬಳಿಕ ಆತನ ಮಾತನ್ನು ನಂಬಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಡಿಯೋ ಕಾಲ್ ಮೂಲಕ ಚಿನ್ನವನ್ನು ಎಲ್ಲಿ ಇಟ್ಟಿದ್ದಾರೆ ಹುಡುಕು ಎಂದು ಹೇಳಿ ಮನೆಯ ಅಲ್ಮೇರಾದಲ್ಲಿಟ್ಟಿದ್ದ 82 ಗ್ರಾಂ ಬಂಗಾರವನ್ನು ತೆಗೆದುಕೊಂಡು ಹೋಗಿ ಶಿಕ್ಷಕನಿಗೆ ಕೊಟ್ಟಿದ್ದಾನೆ ಅಂತ ವಿದ್ಯಾರ್ಥಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಯಾವಾಗ ಈ ವಿಚಾರ ತಂದೆ-ತಾಯಿಗೆ ಗೊತ್ತಾಯಿತೋ ಆಗ ಹೆದರಿಕೊಂಡ ಅಭಿಷೇಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ವಿದ್ಯಾರ್ಥಿಯ ಪೋಷಕರಿಗೆ ಈ ವಿಷಯ ಗೊತ್ತಾಗುತ್ತಲೇ ಶಿಕ್ಷಕ ಉಲ್ಟಾ ಹೊಡೆದಿದ್ದಾನೆ. ನನ್ನ ಬಳಿ ಯಾವುದೇ ಬಂಗಾರ ನೀಡಿಲ್ಲ ಎಂದು ಹೇಳುತ್ತಿದ್ದಾನೆ. ವಿದ್ಯಾರ್ಥಿ ಬಳಿ ಚಿನ್ನ ಪಡೆದು ಬ್ಯಾಂಕ್ನಲ್ಲಿ ಅಡವಿಟ್ಟು ಬಂದಿರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ತೋರಿಸಿದರೂ ಧಾರವಾಡ ಉಪನಗರ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ ಅನ್ನೋದು ಪೋಷಕರ ಆರೋಪ.
ವಿದ್ಯಾರ್ಥಿಯ ಪೋಷಕರು ಉಪನಗರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ ಎಂದು ತಿಳಿದಿಬಂದಿದೆ.




