CrimeKannada NewsKarnataka News

*ಜ್ಯೋತಿಷಿ ಭವಿಷ್ಯವಾಣಿ ನಂಬಿ  ಆತ್ಮಹತ್ಯೆ ಮಾಡಿಕೊಂಡ ಯುವತಿ*

ಪ್ರಗತಿವಾಹಿನಿ ಸುದ್ದಿ: ನೀನು ಅಲ್ಪಾಯುಷಿ ಎಂದು ಹೇಳಿದ್ದ ಜ್ಯೋತಿಷಿಯೊಬ್ಬರ ಭವಿಷ್ಯವಾಣಿ ನಂಬಿ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿ ಎಂಇಐ ಲೇಔಟ್‌ನಲ್ಲಿ ನಡೆದಿದೆ. ವಿದ್ಯಾಜ್ಯೋತಿ (29) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. 

ವಿದ್ಯಾಜ್ಯೋತಿ ತಾನು ಇಷ್ಟಪಟ್ಟಿದ್ದ ಯುವಕನನ್ನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿತ್ತು. ಆದರೆ ಮದುವೆಗೂ ಮುನ್ನ ಆಕೆಗೆ ಜ್ಯೋತಿಷಿಯೊಬ್ಬರು, ನೀನು ಅಲ್ಪಾಯುಷಿ ಎಂದು ಹೇಳಿದ್ದರು. ಇದರ ಪರಿಹಾರಕ್ಕಾಗಿ 9 ದಿನ ಪೂಜೆ ಮಾಡಬೇಕೆಂದು ಕೂಡಾ ಹೇಳಿದ್ದರು ಎನ್ನಲಾಗಿದೆ.

ಈ ಹಿನ್ನೆಲೆ ವಿದ್ಯಾಜ್ಯೋತಿ ಹಾಗೂ ಆಕೆಯ ಕುಟುಂಬಸ್ಥರು 9 ದಿನಗಳ ಕಾಲ ಪೂಜೆ ನೆರವೇರಿಸಿ, ಕೊನೆಯ ದಿನ ಮಾರಮ್ಮ ದೇವರಿಗೆ ತಾಳಿ ಕೊಡಲು ಮುಂದಾಗಿದ್ದರು. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ವಿದ್ಯಾಜ್ಯೋತಿ ವರ್ಕ್ ಪ್ರಂ ಹೋಮ್ ಮಾಡುತ್ತಿದ್ದಳು. ಮಧ್ಯಾಹ್ನ ಊಟದ ನಂತರ ಯುವತಿ ತನ್ನ ರೂಮ್ ಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೊಡಗು ಮೂಲದ ಯುವಕನನ್ನು ಆಕೆ ಪ್ರೀತಿಸುತ್ತಿದ್ದು ಆಕೆಯ ಇಷ್ಟದಂತೆ ಎರಡೂ ಮನೆಯವರು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಮದುವೆಗೂ ಮುನ್ನವೇ ಯುವತಿ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ಆಘಾತಕ್ಕೆ ಕಾರಣವಾಗಿದೆ.

ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button