*ಬೆಳಗಾವಿ ರೈತನ ಮಗ ಯುಪಿಎಸ್ಸಿಯಲ್ಲಿ 224 ನೇ ರ್ಯಾಂಕ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2026 ನೇ ಸಾಲಿನ ಯುಪಿಎಸ್ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಿರಣ ಕಮತೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದು, ಜಿಲ್ಲೆಯ ಬಡ ರೈತಾಪಿ ಕುಟುಂಬದ ಯುವಕನೋರ್ವ ದೇಶಕ್ಕೆ 224ನೇ ರ್ಯಾಂಕ್ ಪಡೆದು, ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ತಾಲ್ಲೂಕಿನ ಕಲಕಾಂಬ ಗ್ರಾಮದ ರಾಹುಲ್ ಜಯವಂತ ಪಾಟೀಲ(30) ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆಗೈದವರು. ತಂದೆ ಜಯವಂತ ಪಾಟೀಲ ಕೃಷಿಕರು. ತಾಯಿ ಸುರೇಖಾ ಗೃಹಿಣಿ. ಸಹೋದರ ಪ್ರೀತಂ ಊರಲ್ಲಿ ಬಣ್ಣದ ಅಂಗಡಿ ನಡೆಸುತ್ತಿದ್ದರೆ, ಸಹೋದರಿ ಪ್ರಿಯಾ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿ ಆಗಿದ್ದಾರೆ. ಜೊತೆಗೆ ಕುಟುಂಬದ ಕನಸು ನನಸಾಗಿದ್ದರಿಂದ, ಮನೆಯವರೆಲ್ಲಾ ಸಂತಸಗೊಂಡಿದ್ದಾರೆ.
ಸದ್ಯ ಡೆಹ್ರಾಡೂನ್ ಇಂದಿರಾ ಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿಯಲ್ಲಿ ಕಳೆದ 4 ತಿಂಗಳಿನಿಂದ ರಾಹುಲ್ ಪಾಟೀಲ ಭಾರತೀಯ ಅರಣ್ಯ ಸೇವೆ ತರಬೇತಿ ಪಡೆಯುತ್ತಿದ್ದಾರೆ.
ರಾಹುಲ್ ಪಾಟೀಲ ಅವರು ಒಟ್ಟು ಆರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. 2023ರಲ್ಲಿ ಯುಪಿಎಸ್ಸಿ 804ನೇ ರ್ಯಾಂಕ್ ಬಂದಾಗ ಭಾರತೀಯ ರೈಲ್ವೆ ಸಂಚಾರ ಸೇವೆ ಸೇರಿದ್ದರು. ಅದಾದ ಬಳಿಕ ಯುಪಿಎಸ್ಸಿ ಅರಣ್ಯದಲ್ಲಿ 103ನೇ ರ್ಯಾಂಕ್ ಸಿಕ್ಕಿದ್ದರಿಂದ ಭಾರತೀಯ ಅರಣ್ಯ ಸೇವೆಗೆ ಸೇರ್ಪಡೆಯಾಗಿದ್ದರು. ಈಗ ಕೊನೆಯ ಅವಕಾಶದಲ್ಲಿ 224ನೇ ರ್ಯಾಂಕ್ ಗಳಿಸುವ ಮೂಲಕ ತಮ್ಮ ಐಎಎಸ್ ಕನಸನ್ನು ನನಸು ಮಾಡಿಕೊಂಡಿದ್ದಾರೆ.




