Kannada NewsKarnataka NewsLatest

*ಸಾಧನೆಗಳನ್ನು ಗುರುತಿಸಿ, ಗೌರವಿಸುವುದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಶಯ*

*ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : *ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂದೇಶ ನೀಡಿದ್ದಾರೆ.

“ನನ್ನ ಎಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ಮಹಿಳೆಯರ ಸಬಲೀಕರಣ, ಸಮಾನತೆ ಮತ್ತು ಘನತೆಯ ಬದುಕಿಗಾಗಿ ಜಾಗೃತರಾಗುವುದು, ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳನ್ನು ಗುರುತಿಸಿ, ಗೌರವಿಸುವುದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಶಯ.

ಇಂದಿನ ಆಧುನಿಕ‌ ಕಾಲಘಟ್ಟದಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ಮಹಿಳೆಯರ ಪಾತ್ರ ಸಾಕಷ್ಟು ಬದಲಾಗಿದೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರು ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಮಹಿಳೆಯರು ತಮ್ಮ ಸಾಮಾಜಿಕ ಹಾಗೂ ದೈಹಿಕ ಸವಾಲುಗಳನ್ನು ಮೀರಿ ಬೆಳೆದಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ಇಂದಿಗೂ ಲಿಂಗ ಅಸಮಾನತೆ, ಕೌಟುಂಬಿಕ ದೌರ್ಜನ್ಯ, ಉದ್ಯೋಗ ಸ್ಥಳದಲ್ಲಿ ದೈಹಿಕ ಮತ್ತು ಮಾನಸಿಕ ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. 

Home add -Advt

ಭಾರತದಲ್ಲಿ ಮನುಸ್ಮೃತಿಯ ಪ್ರಭಾವ ಮತ್ತು ಆಚರಣೆ ಗಾಢವಾಗಿದ್ದ ಕಾಲದಲ್ಲಿ ಸಮಾನ ಅವಕಾಶ ಎನ್ನುವುದು ಮಹಿಳೆಯರ ಪಾಲಿಗೆ ಕನ್ನಡಿಯೊಳಗಿನ ಗಂಟಿನಂತಿತ್ತು. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರಿಂದ ಆರಂಭವಾದ ಸಾಮಾಜಿಕ ನ್ಯಾಯದ ಚಳವಳಿ ಬರೀ ವರ್ಣಾಧಾರಿತ ವ್ಯವಸ್ಥೆಯ ವಿರುದ್ಧದ ಪ್ರತಿರೋಧಕ್ಕೆ ಸೀಮಿತವಾಗದೆ ಲಿಂಗ ಸಮಾನತೆಯನ್ನು ಕೂಡ ಒಳಗೊಂಡಿತ್ತು ಎನ್ನುವುದು ಗಮನಾರ್ಹ ಸಂಗತಿ. ಹೀಗಾಗಿಯೇ ಅಕ್ಕಮಹಾದೇವಿ ಸೇರಿ ಅನೇಕರು ಶರಣ ಚಿಂತನೆಗಳಿಂದ ಪ್ರೇರಣೆಗೊಂಡು, ಲಿಂಗದೀಕ್ಷೆ ಪಡೆದು ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಹೆಜ್ಜೆಹಾಕಿದರು.

ಹೀಗಿಯೇ ಹಲವು ಮಹಾನ್ ನಾಯಕರು ಮಹಿಳಾ ಸಮಾನತೆಯ ಹೋರಾಟವನ್ನು ಮುನ್ನಡೆಸಿಕೊಂಡು ಬಂದ ನಿದರ್ಶನಗಳು ನಮ್ಮ ಇತಿಹಾಸ ಪುಟಗಳಲ್ಲಿದೆ. ಭಾರತಕ್ಕೆ ಬ್ರಿಟಿಷರ ಆಗಮನದ ತರುವಾಯ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದಾಗಿ ಮಹಿಳೆಯರ ಸಾಮಾಜಿಕ ಸ್ಥಿತಿಗತಿಗಳು ಸುಧಾರಣೆ ಕಂಡರೂ, ಸಮಾಧಾನಕರ ಎನ್ನುವ ಸ್ಥಿತಿ ತಲಪಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅನುಷ್ಠಾನದೊಂದಿಗೆ ದೇಶದಲ್ಲಿ ಸ್ತ್ರೀ ಶೋಷಣೆಯ ಕರಾಳತೆ ಕ್ಷೀಣಿಸುತ್ತಾ ಬಂದಿದೆ. ಮಹಿಳೆಯರಿಗೆ ಲಿಂಗ ತಾರತಮ್ಯ, ದೈಹಿಕ ಹಾಗೂ ಮಾನಸಿಕ ಶೋಷಣೆಗಳಿಂದ ಸಂವಿಧಾನವು ರಕ್ಷಣೆ ನೀಡಿ, ಅವಕಾಶಗಳ ಬಾಗಿಲು ತೆರೆಯುವಂತೆ ಮಾಡಿತು. 

ದೊರೆತ ಅವಕಾಶಗಳನ್ನು ಪೂರ್ಣ ಸದುಪಯೋಗ ಪಡಿಸಿಕೊಂಡು, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಾಧನೆ ಮಾಡುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೆ ಮುಂದಿದ್ದಾರೆ ಎನ್ನುವ ಅಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ಇತ್ತೀಚಿನ ಯುಪಿಎಸ್.ಸಿ ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ಆಯ್ಕೆಯಾಗಿದ್ದು, ಇವರಲ್ಲಿ ಮಹಿಳೆಯರು ಕೂಡ ಉತ್ತಮ ಅಂಕಗಳೊಂದಿಗೆ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಈ ಎಲ್ಲಾ ಸಾಧಕರಿಗೆ, ವಿಶೇಷವಾಗಿ ಸಾಧಕ ಹೆಣ್ಣುಮಕ್ಕಳಿಗೆ ಅಭಿನಂದನೆಗಳು. ಇವರ ಸಾಧನೆ ಯುವಜನಾಂಗಕ್ಕೆ ಸ್ಪೂರ್ತಿಯಾಗಲಿ, ಇನ್ನಷ್ಟು ಮಹಿಳೆಯರು ಐಎಎಸ್, ಐಪಿಎಸ್ ನಂತಹ ಹುದ್ದೆಗಳನ್ನು ಹೊಂದಿ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸುತ್ತೇನೆ. 

ನಮ್ಮ ಸರ್ಕಾರ ಕಳೆದ ಎರಡುಮುಕ್ಕಾಲು ವರ್ಷಗಳಲ್ಲಿ ಮಹಿಳೆಯರ ಸಬಲೀಕರಣದ ಹಾದಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳು ಮಹಿಳಾ ಕೇಂದ್ರಿತ ಯೋಜನಗಳೇ ಆಗಿವೆ ಎನ್ನುವುದನ್ನು ಅತ್ಯಂತ ಹೆಮ್ಮೆಯಿಂದ ತಿಳಿಸಬಯಸುತ್ತೇನೆ. ಶಕ್ತಿ ಯೋಜನೆಯು ಮಹಿಳೆಯರನ್ನು ಶಿಕ್ಷಣ, ಉದ್ಯೋಗ, ಆರೋಗ್ಯ ಸಂಬಂಧಿ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಗಳನ್ನಾಗಿಸಿದೆ. ಸಾರಿಗೆ ಬಸ್ಸುಗಳಲ್ಲಿ ನಾವು ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಕಾರಣದಿಂದಾಗಿ ಬೆಂಗಳೂರು ನಗರದಲ್ಲಿ ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಶೇ.23 ಏರಿಕೆಯಾಗಿದ್ದರೆ, ರಾಜ್ಯದ ಇತರ ಭಾಗಗಳಲ್ಲಿ ಕೂಡ ಗಣನೀಯ ಪ್ರಗತಿ ಕಂಡಿದೆ.

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಮನೆ ಯಜಮಾನಿಯರ ಕುಟುಂಬ ನಿರ್ವಹಣೆಯ ಆರ್ಥಿಕ ಭಾರವನ್ನು ತಗ್ಗಿಸಿ, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ರಾಜ್ಯದ ಸರ್ಕಾರಿ ಹಾಗೂ ನೋಂದಾಯಿತ ಉದ್ದಿಮೆಗಳು / ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವಯೋಮಾನದ ಮಹಿಳೆಯರಿಗೆ ತಿಂಗಳಿಗೊಂದು ವೇತನ ಸಹಿತ ಕಡ್ಡಾಯ ಋತುಚಕ್ರ ರಜೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯ ಎನ್ನುವ ಹೆಮ್ಮೆ ನಮ್ಮದು.

ನಮ್ಮ 2026-27ನೇ ಸಾಲಿನ ಬಜೆಟ್ ನಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ರೂ. 94,663 ಕೋಟಿ ಅನುದಾನ ಘೋಷಣೆ ಮಾಡಿ, ಹೆಣ್ಣುಮಕ್ಕಳನ್ನು ಸಮಾನವಾಗಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವ ಪ್ರಯತ್ನ ಮಾಡಿದ್ದೇವೆ. ಜಗತ್ತಿನೆಲ್ಲೆಡೆ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವು ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದರೆ, ಕರ್ನಾಟಕದಲ್ಲಿ ಈ ದಿನವನ್ನು ಸಾರ್ಥಕವಾಗಿಸಿದ್ದೇವೆ.

ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಪುರುಷರ ಬದುಕಿಗೆ ಪರಿಪೂರ್ಣತೆಯನ್ನು ಕೊಡುವ ಪ್ರಕೃತಿಯ ವಿಶಿಷ್ಟ, ಅನನ್ಯ ಸೃಷ್ಟಿ. ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ ಬದುಕಿನ ಬಂಡಿಯ ನೊಗಹೊತ್ತು, ಪುರುಷರಿಗೆ ಸಮನಾಗಿ ದುಡಿಯುತ್ತಿರುವ ಮಹಿಳೆಯರ ತ್ಯಾಗ, ಸೇವೆ, ಸಮರ್ಪಣೆಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇಂದು ಸ್ಮರಿಸಿ, ಗೌರವಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಮತ್ತೊಮ್ಮೆ ನಾಡಿನ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಬಯಸುತ್ತೇನೆ”

Related Articles

Back to top button