Belagavi NewsBelgaum NewsKarnataka NewsLatestPolitics

*ಅಧಿಕಾರ ಮೇರೆಯುವುದಕ್ಕಲ್ಲ, ಅದು ಶಾಶ್ವತವೂ ಅಲ್ಲ, ಅಧಿಕಾರಕ್ಕೆ ಬಂದಾಗ ನಾಲ್ಕು ಜನರಿಗೆ ಉಪಕಾರ ಮಾಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

ಮುತಗಾ ಗ್ರಾಮದಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ. ಕ್ಷೇತ್ರದ ಮಕ್ಕಳು ರಾಜ್ಯ ಹಾಗೂ ದೇಶವನ್ನು ಆಳುವಂತ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂಬುದೇ ನನ್ನ ಕನಸು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಮುತಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಹಾಗೂ ಶಾಲೆಯ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಕ್ಷೇತ್ರದಲ್ಲಿ ಸುಮಾರು 300 ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದು, 60 ಸ್ಮಾರ್ಟ್‌ ಕ್ಲಾಸ್‌ ಗಳನ್ನು ಆರಂಭಿಸಲಾಗಿದೆ. ಮುತಗಾ ಸೇರಿದಂತೆ 3 ಕಡೆ ಪಬ್ಲಿಕ್‌ ಸ್ಕೂಲ್‌ಗಳನ್ನು ಮಂಜೂರು ಮಾಡಲಾಗಿದೆ ಎಂದರು.

Home add -Advt

ಶಿಕ್ಷಕರು ನೀಡಿದ ಧೈರ್ಯವೇ ನನಗೆ ಸ್ಫೂರ್ತಿ
ಅಕ್ಷರ ಕಲಿಸಿದ ಗುರುಗಳನ್ನು ಗೌರವಿಸುವುದು ಮತ್ತು ಬೆಳೆದು ಬಂದ ಶಾಲೆಯ ಅಭಿವೃದ್ಧಿಯಲ್ಲಿ ಮಾಜಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಈ ಶಾಲೆಯಿಂದ ನೂರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ. ಇದಕ್ಕೆ ಗುರುಗಳ ಪರಿಶ್ರಮವೇ ಮುಖ್ಯ, ನಾನು ಲಕ್ಷಾಂತರ ಜನರ ಎದುರು ಮೈಕ್‌ ಹಿಡಿದು ಭಾಷಣ ಮಾಡಲು ನನಗೆ ಶಿಕ್ಷಕರು ಕೊಟ್ಟ ಧೈರ್ಯವೇ ಕಾರಣ. ಬದುಕಿನ ದಾರಿ ತೋರಿಸಿದ ಗುರುಗಳಿಗೆ ಸಲ್ಲಿಸುವ ಗುರುವಂದನಾ ನಮ್ಮ ಸಂಸ್ಕಾರದ ಸಂಕೇತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದರು.

ಸುಸಜ್ಜಿತ ಗುರುಭವನ ನಿರ್ಮಾಣ
ಅಕ್ಷರ ಕಲಿಸಿದ ಗುರುಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಇದಕ್ಕಾಗಿ ಬೆಳಗಾವಿಯಲ್ಲಿ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೆ ಸುಸಜ್ಜಿತ ಗುರುಭವನ ನಿರ್ಮಾಣ ಆಗುತ್ತಿದೆ. ಗುರು ಕಾಣಿಕೆ ನೀಡುವ ಸಲುವಾಗಿ 15 ಕೋಟಿ ರೂಪಾಯಿ ಬೆಲೆ ಬಾಳುವ ಸುಮಾರು ಅರ್ಧ ಎಕರೆ ಜಾಗವನ್ನು ಶಿಕ್ಷಕರ ಸಂಘಕ್ಕೆ ಉಚಿತವಾಗಿ ನೀಡಲಾಗಿದೆ. ಗುರುಭವನ ನಿರ್ಮಾಣಕ್ಕೂ ಧನ ಸಹಾಯ ಮಾಡುವುದಾಗಿ ಮಾತು ಕೊಟ್ಟಿರುವೆ ಎಂದು ಸಚಿವರು ಹೇಳಿದರು.

ಅಧಿಕಾರ ಮೇರೆಯುವುದಕ್ಕಲ್ಲ, ಅಧಿಕಾರ ಎಂಬುದು ಶಾಶ್ವತವೂ ಅಲ್ಲ, ಅಧಿಕಾರಕ್ಕೆ ಬಂದಾಗ ನಾಲ್ಕರು ಜನರಿಗೆ ಉಪಕಾರ ಮಾಡಿಕೊಡುವ ಮನಸ್ಸು ಹೊಂದಿರಬೇಕು ಎಂದರು.

ಬಡವರ ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣ ಸಿಗುವ ಉದ್ದೇಶದಿಂದಲೇ ಅಂಗನವಾಡಿ ಕೇಂದ್ರಗಳಲ್ಲಿ ಇಂಗ್ಲೀಷ್‌ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಕಾರ್ಯಕ್ರಮದಲ್ಲಿ ರಾಯಣ್ಣ ಓಬನ್ನವರ, ಕಲ್ಲಪ್ಪ ಓಬನ್ನವರ, ಮಾರುತಿ ಮಲ್ಲವ್ವಗೋಳ, ಬಾಗಣ್ಣ ಮಲ್ಲವ್ವಗೋಳ, ನಾಗೇಶ್ ದೇಸಾಯಿ, ಮಾಲಾ ಅಂಗಡಿ, ಪ್ರಭಾಕರ್ ತಳವಾರ, ಮಧು ಕುಂಪಿ, ಭರಮಾ ಮಲ್ಲವ್ವಗೋಳ, ಭೀಮಸೇನ್, ಶಾಲೆಯ ಶಿಕ್ಷಣ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು‌.

Related Articles

Back to top button