Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿಯ ಜಿಮಖಾನಾ ಕ್ಲಬ್‌ನಲ್ಲಿ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ಲಬ್ ನಲ್ಲಿ ರಮ್ಮಿ ಆಡುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದು, ಭಯದ ವಾತಾವರಣ ನಿರ್ಮಾಣ ಆಗಿರುವ ಘಟನೆ ನಡೆದಿದೆ.

ಬೆಳಗಾವಿ ನಗರದ ಪೊಲೀಸ್ ಕಮೀಷನರ್ ಕಚೇರಿ ಸಮೀಪದ ಜಿಮಖಾನಾ ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಆತಂಕದ ವಾತಾವರಣ ನಿರ್ಮಾಣವಾಯಿತು. 

ರಮ್ಮಿ ಆಡುತ್ತಿದ್ದ ವೇಳೆ ಸುರೇಶ್ ಜಾಲಗಾರ ಎಂಬಾತನ ಮೇಲೆ ದುಷ್ಕರ್ಮಿಗಳು ಹತ್ಯೆಗೆ ಯತ್ನ ನಡೆಸಲಾಗಿದೆ. ಐವರು ಆರೋಪಿಗಳು ಜಿಮಖಾನಾ ಕ್ಲಬ್‌ಗೆ ಬಂದಿದ್ದು, ಇಬ್ಬರು ಹೊರಗೆ ಕಾವಲು ನಿಂತರೆ, ಮೂವರು ಒಳ ಪ್ರವೇಶಿಸಿ ಸುರೇಶ್ ಜಾಲಗಾರನ ಮೇಲೆ ದಾಳಿ ನಡೆಸಿದ್ದಾರೆ.

ಆರೋಪಿಗಳು ಮೊದಲು ಗನ್‌ನಿಂದ ತಲೆಗೆ ಹೊಡೆದು, ಬಳಿಕ ಗುಂಡು ಹಾರಿಸಲು ಯತ್ನಿಸಿದ್ದಾರೆ. ಆದರೆ ಸುರೇಶ್ ಅವರನ್ನು ತಳ್ಳಿ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರೇಶ್ ಹೊರಗೆ ಓಡಿ ಹೋದ ಬಳಿಕ ಆರೋಪಿಗಳು ಕ್ಲಬ್‌ನಿಂದ ಹೊರಬಂದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. 

ಘಟನೆಯಿಂದ ಕೆಲಕಾಲ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಪೊಲೀಸರು ಸುರೇಶ್ ಜಾಲಗಾರನನ್ನು ವಶಕ್ಕೆ ಪಡೆದು ಕ್ಯಾಂಪ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. 

ಈ ಹಿಂದೆ ನಾನು ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ಫೈರಿಂಗ್ ಮಾಡಿದ್ದೆ. ಅದೇ ಪ್ರಕರಣದ ಸೇಡು ತೀರಿಸಿಕೊಳ್ಳಲು ಪ್ರಫುಲ್ ಪಾಟೀಲ್ ಕಡೆಯವರು ನನ್ನ ಮೇಲೆ ಹತ್ಯೆಗೆ ಯತ್ನ ನಡೆಸಿದ್ದಾರೆ” ಎಂದು ಸುರೇಶ್ ಜಾಲಗಾರ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. 

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಬರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸೋಕೋ ತಂಡ ಕೂಡ ಪರಿಶೀಲನೆ ನಡೆಸಿತು. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button