
ಪ್ರಗತಿವಾಹಿನಿ ಸುದ್ದಿ: ನಾನು ಆರೋಗ್ಯವಾಗಿದ್ದು, ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ.
ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವಿದ್ದ ಕಾರಣ ನಾಲ್ಕು ದಿನಗಳ ಹಿಂದೆ ನನ್ನ ಕನಕಗಿರಿ ಮತಕ್ಷೇತ್ರಕ್ಕೆ ಹೋಗಿದ್ದೆ. ಕಾರ್ಯಕ್ರಮ ಮುಗಿಸಿಕೊಂಡು ಕೊಪ್ಪಳದಿಂದ ಬೆಂಗಳೂರಿಗೆ ಹೊರಟು ಬರುವಾಗ ಭಾನುವಾರ ರಾತ್ರಿ ಮಾರ್ಗ ಮಧ್ಯೆ ಎದೆ ಚುಚ್ಚಿದ ಅನುಭವ ಆಯಿತು. ಈ ಹಿನ್ನೆಲೆಯಲ್ಲಿ ನನ್ನ ಕುಟುಂಬದ ವೈದ್ಯರೊಂದಿಗೆ ಕರೆ ಮಾಡಿ ಮಾತನಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಒಮ್ಮೆ ತಪಾಸಣೆ ಮಾಡಿಸುವಂತೆ ಸೂಚಿಸಿದರು. ಹೀಗಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ರೀತಿ ಆಗಿದೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಾನು ಸೋಮವಾರ ಬೆಳಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಎಂದಿನಂತೆ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.
ಯಾರು ಕೂಡ ವದಂತಿಯನ್ನು ಹಬ್ಬಿಸುವುದು ಬೇಡ. ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿದ್ದೇನೆ ಅಷ್ಟೇ. ಆರೋಗ್ಯವಾಗಿದ್ದೇನೆ ಎಂದಿದ್ದಾರೆ.



