*ಮಗಳಿಗೆ ಸುಮ್ಮನಿರು ಎನ್ನಬೇಡಿ, ಮಾತನಾಡು ಎನ್ನಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

* *ಪಿರಿಯಾಪಟ್ಟಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*
* *ಮಹಿಳೆಯನ್ನು ದುರ್ಬಲ ಎಂದು ನೋಡುವ ಕಾಲ ಮುಗಿದಿದೆ*
ಪ್ರಗತಿವಾಹಿನಿ ಸುದ್ದಿ, *ಪಿರಿಯಾಪಟ್ಟಣ:* ಮಹಿಳೆಯರು ಇವತ್ತು ಕಟ್ಟುಪಾಡುಗಳನ್ನು ಒಡೆದು ಮುಂದೆ ಸಾಗುತ್ತಿದ್ದಾರೆ. ಸ್ವಾಭಿಮಾನದ ಜೀವನ ಕಂಡುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಮೊದಲು ಮಹಿಳೆಯರಿಗೆ ಎಷ್ಟು ಕಷ್ಟವಿತ್ತು. ಗಂಡಸರನ್ನು ಮಾತನಾಡಿಸುವಾಗ ಹೆಂಗಸರು ತಲೆ ಬಗ್ಗಿಸಿ ಮಾತನಾಡಬೇಕಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಹಿಳೆಯನ್ನು ದುರ್ಬಲ ಎಂದು ನೋಡುವ ಕಾಲ ಮುಗಿದಿದೆ. ಮಹಿಳೆಯನ್ನು ನಿರ್ಧಾರ ಮಾಡುವ ಶಕ್ತಿಯಾಗಿ ಗುರುತಿಸುವ ಕಾಲ ಬಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗೃಹಲಕ್ಷ್ಮಿ ಯೋಜನೆಯನ್ನು ಹಕ್ಕಿನಿಂದ ತೆಗೆದುಕೊಂಡು, ಶಕ್ತಿ ಯೋಜನೆಯಲ್ಲಿ ಬಹಳ ಸ್ವಾಭಿಮಾನದಿಂದ ಪ್ರಯಾಣ ಮಾಡುತ್ತಿದ್ದಾಳೆ. ಒಬ್ಬ ಮಹಿಳಾ ಮಂತ್ರಿಯಾಗಿ ಇದಕ್ಕಿಂತ ಸಂತೋಷ ಇನ್ನೊಂದಿಲ್ಲ. ನಾನು ರಾಣಿ ಚನ್ನಮ್ಮನ ವಂಶಸ್ಥೆ, 300 ವರ್ಷ ನಮ್ಮನ್ನು ಆಳಿದ ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ಹೋರಾಡಿದ ಮಹಿಳೆ ನಮ್ಮ ಕಿತ್ತೂರು ರಾಣಿ ಚನ್ನಮ್ಮ. ದೊಡ್ಡ ದೊಡ್ಡ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಸ್ವಾಭಿಮಾನಿ ಮಹಿಳೆ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ. ಇದರರ್ಥ ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಮಾನವನ ಕರ್ತವ್ಯ ಎಂದರು.
ನಮ್ಮ ಮಕ್ಕಳೇ ಮುಂದಿನ ಭವಿಷ್ಯ, ಮೌನವಾಗಿರದೇ ಮಾತನಾಡಬೇಕು ಎಂದು ನಾವು ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೇಳಿಕೊಡಬೇಕು. ಕೇವಲ ವಿದ್ಯಾಭ್ಯಾಸ ಕಲಿಸದೇ ಬೇರೆಯವರು ಕಲಿಯಲು ಮಾತನಾಡುವಂತೆ ನಿಮ್ಮ ಮಕ್ಕಳನ್ನು ರೂಪಿಸಿ, ಸ್ವಾಭಿಮಾನದ ಪಾಠವನ್ನು ಕಲಿಸಬೇಕು, ಬೇರೆಯವರಿಗೆ ಗೌರವ ಕೊಡುವುದರ ಜೊತೆಗೆ ನಿನಗೆ ನೀನು ಗೌರವ ಕೊಡುವುದನ್ನು ಕಲಿ ಎಂಬುದನ್ನು ಕಲಿಸಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಾವು ಆರ್ಥಿಕವಾಗಿ ಸಬಲೀಕರಣಗೊಂಡರೆ ಬೇರೆಯವರು ನಮಗೆ ಮರ್ಯಾದೆಯನ್ನು ಕೊಡುತ್ತಾರೆ. ಹೀಗಾಗಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಇದು ನಮಗೆ ಸ್ವಾಭಿಮಾನದ ಪ್ರತಿಷ್ಠೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
* *ಮನುಷ್ಯನಿಗೆ ಛಲ ಮುಖ್ಯ*

ನಮಗೆ ಅವಕಾಶವಿಲ್ಲ ಎಂದರೆ ಅವಕಾಶ ಸೃಷ್ಟಿಸಿಕೊಳ್ಳಬೇಕು. ಕಾಯುತ್ತ ಕುಳಿತುಕೊಳ್ಳಬಾರದು. ನಾನು ಬೆಳಗಾವಿ ಜಿಲ್ಲಾ ಪಂಚಾಯತ್, ಬೆಳಗಾವಿ ಕಾರ್ಪೋರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿದಾಗ ಟಿಕೆಟ್ ನೀಡಲಿಲ್ಲ, ಆದರೆ ಛಲ ಬಿಡದೆ ಪಕ್ಷವನ್ನು ಸಂಘಟಿಸಿದೆ. ಇವಳಿಗೆ ಟಿಕೆಟ್ ಕೊಡಲಿಲ್ಲ ಅಂದರೆ ಬೇರೆಯವರನ್ನು ಸೋಲಿಸುತ್ತಾಳೆ ಅನ್ನುವಷ್ಟರ ಮಟ್ಟಿಗೆ ಬೆಳೆದೆ. ಇಂದು ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿರುವೆ ಎಂದರು.
* *ಪಿರಿಯಾಪಟ್ಟಣಕ್ಕೆ ಬರುವ ಯೋಗ ಇತ್ತು*
ಎಲ್ಲಿಯ ಬೆಳಗಾವಿ ಎಲ್ಲಿಯ ಪಿರಿಯಾಪಟ್ಟಣ, ನಾನು ಇಲ್ಲಿಗೆ ಬರುವ ಯೋಗ ಇತ್ತು, ಋಣ ಇತ್ತು. ಹೀಗಾಗಿ ನಾನು ಪಿರಿಯಾಪಟ್ಟಣಕ್ಕೆ ಬರುವ ಅವಕಾಶ ಲಭಿಸಿತು. ಕಾರ್ಯಕ್ರಮಕ್ಕೆ ಉತ್ತಮ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿರುವುದನ್ನು ನೋಡಿ ತುಂಬಾ ಖುಷಿ ಆಯಿತು. ಮಹಿಳೆಯರಿಗೆ ಉತ್ತಮ ಸಂದೇಶ ನೀಡುವುದೇ ನನ್ನ ಕೆಲಸ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
* *ಕಾಂಗ್ರೆಸ್ ಪಕ್ಷದಿಂದ ಮಹಿಳಾ ಸಬಲೀಕರಣ*
ಕೇಂದ್ರ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕಾಂಗ್ರೆಸ್ ಪಕ್ಷ ಮಾತ್ರ ಮಹಿಳೆಯರ ಪರ ಚಿಂತನೆಗಳನ್ನು ಒಳಗೊಂಡಿದೆ. ಬೇರೆಯವರು ಮಾತನಾಡುತ್ತಾರೆ, ನಾವು ಮಾತನಾಡಿದನ್ನೆ ಮಾಡಿ ತೋರಿಸುತ್ತೇವೆ. ಇದಕ್ಕೆ ಪಂಚ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಮಾರಂಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಆಶ್ರಯ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸ್ವಾಮೀಗೌಡ, ರಹಮತ್ ಜಾನ್ ಬಾಬು, ಕೆಪಿಸಿಸಿ ಸದಸ್ಯರಾದ ಅನಿಲ್, ಅನಿತಾ ತೋಟದಪ್ಪ, ನಿರೂಪ ರಾಜೇಶ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ್, ಸಿಡಿಪಿಒ ವೀಣಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.

