*ಬೆಳಗಾವಿಯಲ್ಲಿ ಮತ್ತೊಂದು ಪ್ರಕರಣ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ; ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್*

19 ಲಕ್ಷ ಹಣ, ಚಿನ್ನಾಭರಣ ಲೂಟಿ ಮಾಡಿದ ಯುವಕ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಫೇಸ್ ಬುಕ್ ನಲ್ಲಿ ಪರಿಚಯನಾದ ಯುವಕನೊಬ್ಬ ಯುವತಿಗೆ ಪ್ರೀತಿಸುವುದಾಗಿ ಹೇಳಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದೂ ಅಲ್ಲದೇ 19 ಲಕ್ಷ ಹಣ, ಚಿನ್ನಾಭರಣವನ್ನು ದೋಚಿರುವ ಘಟನೆ ನಡೆದಿದೆ.
ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ವ್ಯಪತಿಯಲ್ಲಿ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ಕಮಿಷನರ್ ಗೆ ದೂರು ನೀಡಿದ್ದಾಳೆ. ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತ ಯುವತಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಾನೆ. ಬೆಳಗಾವಿಯ ಮಾಧವಾ ಕಾಲೋನಿ ನಿವಾಸಿ ಈತ ಎಂದು ತಿಳಿದುಬಂದಿದೆ.
ಇಬ್ಬರ ಪರಿಚಯದ ಬೆನ್ನಲ್ಲೇ ಈಶ್ವರ್ ಸಿಂಗ್ ಪ್ರೇಮ್ ಸಿಂಗ್ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಕೆಗೆ ಗೊತ್ತಾಗದಂತೆ ಖಾಸಗಿ ವಿಡಿಯೋಗಳನ್ನು ಮಾಡಿಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಾನೆ.
ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಯುವತಿಯಿಂದ ಬರೋಬ್ಬರಿ 19 ಲಕ್ಷ ರೂಪಾಯಿ ಹಣ ದೋಚಿದ್ದಾನೆ. ಸಂತ್ರಸ್ತೆಯ ತಾಯಿಯ ಚಿನ್ನ ಹಾಗೂ ತಂದೆಯ ಎಫ್‌ಡಿ ಹಣವನ್ನೂ ಈತ ಹಂತ ಹಂತವಾಗಿ ವಸೂಲಿ ಮಾಡಿದ್ದಾನಂತೆ.
ಸುಮಾರು 150 ಗ್ರಾಂ ಚಿನ್ನಾಭರಣ ಹಾಗೂ 19 ಲಕ್ಷ ರೂಪಾಯಿಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ಇಷ್ಟೆಲ್ಲ ಆದ ಮೇಲೆ ಯುವಕನ ತಾಯಿ 3 ಕೋಟಿ ರೂಪಾಯಿ ಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾಳಂತೆ
ಈ ಬಗ್ಗೆ ಶಹಾಪುರ ಠಾಣೆಯಲ್ಲಿ ದೂರು ನೀಡಿದರೆ ಪೊಲೀಸರು ಆರೋಪಿ ಯುವಕ ಹಾಗೂ ಆತನ ಕುಟುಂಬಕ್ಕೆ ಶಾಮೀಲಾಗಿದ್ದಾರೆ. ಬ್ಯಾಂಕ್‌ನಿಂದ ರಿಕವರಿ ಮಾಡಿದ್ದ ಚಿನ್ನವನ್ನು ಮರಳಿ ಯುವಕನಿಗೇ ಕೊಟ್ಟು ಕಳುಹಿಸಿದ್ದಾರೆ ಎಂದು ಯುವತಿ ದೂರುದ್ದಾಳೆ.
ತನಗೆ ನ್ಯಾಯ ಕೊಡಿಸುವಂತೆ ಯುವತಿ ಇಂದು ಕಮಿಷನರ್ ಕಚೇರಿಗೆ ಆಗಮಿಸಿ ದೂರು ನೀಡಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ.


