Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿಯಲ್ಲಿ ಮೊಟ್ಟ ಮೊದಲ ಮರ್ಯಾದಾ ಹತ್ಯೆ*; *ಹೆತ್ತ ಕರುಳು ಬಾಯಿಬಿಡಿಸಿದ ಇನಸ್ಪೆಕ್ಟರ್ ಜಾವೀದ್*; *ಮುಚ್ಚಿಹಾಕಿದ್ದ ಪ್ರಕರಣ ಬಯಲಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮದುವೆಯಾಗಿರುವ ಮಗಳು ಪ್ರೀತಿಸಿದವನ ಜೊತೆ ಓಡಿ ಹೋಗಿದ್ದಾಳೆ ಎಂಬ ಕಾರಣಕ್ಕೆ ಮಗಳನ್ನು ಕೊಲೆ ಮಾಡಿ, ಬಳಿಕ ಸುಟ್ಟು ಹಾಕಿರುವ ಮರ್ಯಾದೆಗೇಡು ಹತ್ಯೆ ಬೆಳಗಾವಿಯಲ್ಲಿ ನಡೆದಿದ್ದು, ಇಡೀ ರಾಜ್ಯವೆ ಬೆಚ್ಚಿಬಿದ್ದಿದೆ.

ಬೆಳಗಾವಿ  ಜಿಲ್ಲೆಯಲ್ಲಿ ಬೆಳಕಿಗೆ ಬಂದ ಮೊಟ್ಟ ಮೊದಲ ಮರ್ಯಾದೆಗೇಡು ಹತ್ಯೆ ಇದು. ತನ್ನ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಗೆ ವಿಷ ಕುಡಿಸಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಹಾಕಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ಮುಚ್ಚಿಹಾಕಲಾಗಿದ್ದ ಪ್ರಕರಣವನ್ನು ಪೊಲೀಸ್ ಇನಸ್ಪೆಕ್ಟರ್ ಜಾವೀದ್ ಮುಶಾಪುರೆ ಚಾಣಾಕ್ಷತನದಿಂದ ಬಯಲಿಗೆಳೆದಿದ್ದಾರೆ.

ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದ, 24 ವರ್ಷದ ಸತ್ಯವ್ವ ಸಂತೋಷ ಹೆಳವಿ ಎಂಬುವವಳೇ ಕೊಲೆಯಾದ ದುರ್ದೈವಿ. ಸತ್ಯವ್ವಳಿಗೆ ರಾಯಬಾಗ ತಾಲೂಕಿನ ಹಣಬರಟ್ಟಿಯ ಸಂತೋಷ ಹೆಳವಿ ಎನ್ನುವವನ ಜೊತೆ ಮದುವೆಯಾಗಿತ್ತು. ಆದರೆ ನದಿಗುಡಿ ಕ್ಷೇತ್ರದ ಕ್ಷತ್ರೀಯ ಜಾತಿಗೆ ಸೇರಿದ ಕೃಷ್ಣಾ ಸಹದೇವ ಪಾಟೀಲ ಎಂಬಾತನನ್ನು ಪ್ರೀತಿಸುತ್ತಿದ್ದ ಆಕೆ, ಇತ್ತೀಚೆಗೆ ತನ್ನ ಪತಿಯನ್ನು ಬಿಟ್ಟು ಆತನ ಜೊತೆ ಹೋಗಿದ್ದಳು. ಇದರಿಂದ ತಮ್ಮ ಕುಟುಂಬದ ಮರ್ಯಾದೆ ಹರಾಜಾಗಿದೆ ಎಂದು ಆಕ್ರೋಶಗೊಂಡಿದ್ದ ತವರು ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದರು.

Home add -Advt

ಮಾರ್ಚ್ 13ರಂದು ಸತ್ಯವ್ವಳನ್ನು ಪತ್ತೆ ಹಚ್ಚಿದ ಕುಟುಂಬಸ್ಥರು, ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮಹಾರಾಷ್ಟ್ರದ ಶಿರೋಳಕ್ಕೆ ಕರೆದುಕೊಂಡು ಹೋಗಿ ಟೆಂಟ್ ಹಾಕಿ ಇಟ್ಟುಕೊಂಡು ಸತತ ಪ್ರಯತ್ನಿಸಿದರೂ ಆಕೆ ಒಪ್ಪಲಿಲ್ಲ. ತಮ್ಮದೇ ಜಾತಿಯ ಬೇರೆ ಹುಡುಗನ ಜೊತೆ ಮದುವೆ ಮಾಡುವುದಾಗೂ ಹೇಳಿದರು. ಆದರೂ ಒಪ್ಪದಿದ್ದಾಗ ಅರಗಕ್ಕೆ ಕರೆದುಕೊಂಡು ಹೋಗಿ ಆಕೆಗೆ ಮಧ್ಯರಾತ್ರಿ ಬಲವಂತವಾಗಿ ವಿಷ ಕುಡಿಸಿ, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಯಾರಿಗೂ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಶವವನ್ನು ಅರಗದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ.

ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡು ಅಮಾನವೀಯ ಕೃತ್ಯ ಬಯಲು ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹೆಳವರ (46), ಸಹೋದರ ಶಾನೂರ ಸದಾಶಿವ ಹೆಳವರ (35) ಮತ್ತು ಬಾವ ಮೊರಬದ ಕಲ್ಲಪ್ಪ ಮಾಯಪ್ಪ ಹೆಳವಿ (40) ಇವರನ್ನು ಬಂಧಿಸಲಾಗಿದ.

ಪತ್ತೆಯಾಗಿದ್ದೇ ರೋಚಕ

ಈ ಪ್ರಕರಣ ಪತ್ತೆಯಾಗಿದ್ದೇ ರೋಚಕ. ಸಂಪೂರ್ಣ ಮುಚ್ಚಿಹೋಗಿದ್ದ ಪ್ರಕರಣದ ಸುಳಿವು ಪಡೆದ ಯಮಕನಮರಡಿ ಪೊಲೀಸ್ ಇನಸ್ಪೆಕ್ಟರ್ ಜಾವೀದ್ ಅತ್ಯಂತ ಚಾಣಾಕ್ಷತನದಿಂದ ಬಯಲು ಮಾಡಿದ್ದಾರೆ. ಎಲ್ಲ ರೀತಿಯ ಪ್ರಯತ್ನದ ನಂತರ ಅಂತಿಮವಾಗಿ ಯುವತಿಯ ತಾಯಿಯನ್ನು ಭೇಟಿ ಮಾಡಿ, ಅವಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ನಿಮ್ಮದು ಹೆತ್ತ ಕರುಳು ಮಗಳ ಸಾವನ್ನು ಸಹಿಸಿಕೊಳ್ಳುವುದು ಕಷ್ಟ. ನಮಗೆ ಎಲ್ಲ ಗೊತ್ತಾಗಿದ, ಏನಾಯಿತು ನಿಜ ಹೇಳಿಬಿಡಿ ಎಂದು ಮನವೊಲಿಸಿದ್ದಾರೆ. ಆಗ ಅಳಲು ಆರಂಭಿಸಿದ ಆ ತಾಯಿ, ಎಲ್ಲ ಕಥೆಯನ್ನು ಬಿಚ್ಚಿಟ್ಟಳು.

ಇದೀಗ 3 ಆರೋಪಿಗಳನ್ನು ಬಂಧಿಸಲಾಗಿದೆ. ಮುಚ್ಚಿ ಹೋಗಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದೇ ರೋಮಾಂಚಕ.

Related Articles

Back to top button