
ಪ್ರಗತಿವಾಹಿನಿ ಸುದ್ದಿ: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭರದಿಂದ ಸಾಗುತ್ತಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಪ್ರಂಟ್ (UDF) ರಾಜ್ಯದಲ್ಲಿ ಅಲೆ ಎಬ್ಬಿಸಿದ್ದು ಬಹುಮತದ ಗಡಿಯನ್ನು ದಾಟಿ ಮುನ್ನಗ್ಗುತ್ತಿದೆ. ಈಗಾಗಲೇ 90ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ಈ ಬಾರಿ ಭಾರಿ ಹಿನ್ನಡೆಯಾಗುವ ಮುನ್ಸೂಚನೆ ಸಿಕ್ಕಿದೆ. ಆಡಳಿತಾರೂಢ ಎಲ್‌ಡಿಎಫ್ ಕೇವಲ 40ರ ಆಸುಪಾಸಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ವಿಶೇಷವೆಂದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ತಮ್ಮ ಭದ್ರಕೋಟೆಯಾದ ಧರ್ಮಡಂ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಎಡರಂಗದ ಪಾಲಿಗೆ ದೊಡ್ಡ ಆಘಾತ ತಂದಿದೆ. ಕೇವಲ ಮುಖ್ಯಮಂತ್ರಿಯಷ್ಟೇ ಅಲ್ಲದೆ, ಅವರ ಸಂಪುಟದ ಸುಮಾರು 12ಕ್ಕೂ ಹೆಚ್ಚು ಸಚಿವರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಈಗಾಗಲೇ ಸಂಭ್ರಮ ಮನೆಮಾಡಿದೆ. ತಿರುವನಂತಪುರಂನಲ್ಲಿರುವ ಪಕ್ಷದ ಕಚೇರಿಯ ಮುಂದೆ ಕಾರ್ಯಕರ್ತರು ಜಮಾಯಿಸಿದ್ದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಸಂಸದ ಶಶಿ ತರೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಜನರು ಬದಲಾವಣೆ ಬಯಸಿದ್ದಾರೆ ಎಂಬುದು ಈ ಟ್ರೆಂಡ್‌ಗಳಿಂದ ಸ್ಪಷ್ಟವಾಗುತ್ತಿದೆ. ಯುಡಿಎಫ್ ಈ ಬಾರಿ ಆರಾಮವಾಗಿ ಸರ್ಕಾರ ರಚಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುಡಿಎಫ್ ಈ ಬಾರಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಅದಕ್ಕೆ ಪೂರಕವಾಗಿಯೇ ಫಲಿತಾಂಶಗಳು ಬರುತ್ತಿವೆ.
ಇನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೂಡ ಕೆಲವು ಕ್ಷೇತ್ರಗಳಲ್ಲಿ ಉತ್ತಮ ಪೈಪೋಟಿ ನೀಡುತ್ತಿದೆ. ಪಾಲಕ್ಕಾಡ್ ಮತ್ತು ನೆಮಮ್ ಸೇರಿದಂತೆ ಸುಮಾರು 5 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಬಿಜೆಪಿ ಈ ಬಾರಿ ಹರಸಾಹಸ ಪಡುತ್ತಿದ್ದು ಕೆಲವು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.

