Belagavi NewsBelgaum NewsCrimeKannada NewsKarnataka News

*ಸೇತುವೆ ಕಾಮಗಾರಿಯ ಯಡವಟ್ಟು: ಮಹಿಳೆ ಸಾವು*

ಪ್ರಗತಿವಾಹಿನಿ ಸುದ್ದಿ: ಇಂದು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರು ಸೇತುವೆ ಕಾಮಗಾರಿಗಾಗಿ ಬಹುದಿನಗಳ ಹಿಂದೆ ತೋಡಲಾಗಿದ್ದ ತೆಗ್ಗಿನಲ್ಲಿ ಆಯತಪ್ಪಿ ಬಿದ್ದು ಸಂಗ್ರಹಗೊಂಡಿದ್ದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ ಸಂಭವಿಸಿದೆ.

ಮೃತರನ್ನು ಹೊಸೂರ ಗ್ರಾಮದ ಮಲ್ಲವ್ವ ಸುರೇಶ ವಿವೇಕಿ (44) ಎಂದು ಗುರುತಿಸಲಾಗಿದೆ. ಮಲ್ಲವ್ವ ಅವರು ಇಂದು ಬೆಳಗಿನ ಜಾವ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಬೈಲಹೊಂಗಲ–ಮುನವಳ್ಳಿ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯ ಸ್ಥಳದಲ್ಲಿ ಕಾಲಮ್ ನಿರ್ಮಾಣಕ್ಕಾಗಿ ತೋಡಲಾಗಿದ್ದ ಆಳವಾದ ತೆಗ್ಗಿಗೆ ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.

Home add -Advt

ಸೇತುವೆ ಕಾಮಗಾರಿಗಾಗಿ ತೋಡಲಾಗಿದ್ದ ತೆಗ್ಗಿನಲ್ಲಿ ಮಳೆ ನೀರು ಸೇರಿದಂತೆ ಹಳ್ಳದ ನೀರು ಸಂಗ್ರಹಗೊಂಡಿದ್ದರಿಂದ, ತೆಗ್ಗಿಗೆ ಬಿದ್ದ ಮಲ್ಲವ್ವ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನೀರು ತುಂಬಿದ್ದ ತೆಗ್ಗಿನ ಆಳ ಹಾಗೂ ಕಾಮಗಾರಿ ಸ್ಥಳದ ಅಪಾಯಕಾರಿ ಪರಿಸ್ಥಿತಿಯಿಂದಾಗಿ ಅವರು ಮೇಲಕ್ಕೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.

ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ದೊಡ್ಡಹಳ್ಳದ ಬೈಲಹೊಂಗಲ-ಮುನವಳ್ಳಿ ರಸ್ತೆಯ ಸ್ಥಳದಲ್ಲಿ ಆಳವಾದ ತೆಗ್ಗುಗಳನ್ನು ತೆರೆದ ಸ್ಥಿತಿಯಲ್ಲಿಯೇ ಬಿಡಲಾಗಿದ್ದು, ಅದರಲ್ಲಿ ನೀರು ಸಂಗ್ರಹಗೊಂಡಿತ್ತು. ಸಾರ್ವಜನಿಕರು ಸಂಚರಿಸುವ ಪ್ರಮುಖ ರಸ್ತೆಯಲ್ಲೇ ಇಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದರೂ, ಜನರ ಸುರಕ್ಷತೆಗಾಗಿ ಸೂಕ್ತ ಬ್ಯಾರಿಕೇಡ್, ತಡೆಗೋಡೆ, ಎಚ್ಚರಿಕೆ ಫಲಕ ಹಾಗೂ ರಾತ್ರಿ ವೇಳೆ ಗೋಚರಿಸುವ ಸುರಕ್ಷತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಅಳವಡಿಸಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಈ ಕುರಿತು ಹಲವು ಬಾರಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದ್ದು, ಆದರೂ ಅಪಾಯಕಾರಿ ತೆಗ್ಗನ್ನು ಮುಚ್ಚುವ ಅಥವಾ ಸಾರ್ವಜನಿಕರು ಅದರ ಸಮೀಪಕ್ಕೆ ತೆರಳದಂತೆ ತಡೆಯುವ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಗುತ್ತಿಗೆದಾರನಿಗೆ ಜನಪ್ರನಿಧಿಗಳು ಸ್ಥಳಕ್ಕೆ ಆಗಮಿಸಿ ಎಚ್ಚರಿಕೆ ನೀಡಿದ್ದರೂ ಗುತ್ತಿಗೆದಾರ ಕ್ಯಾರೆ ಎನ್ನುತ್ತಿಲ್ಲ ಈ ಬಗ್ಗೆ  ಗ್ರಾಮಸ್ಥರು ಆರೋಪಿಸಿದ್ದಾರೆ.

ಅಪಾಯಕಾರಿ ತೆಗ್ಗಿನಲ್ಲಿ ನೀರು ಸಂಗ್ರಹವಾಗಿರುವುದು ಹಾಗೂ ಜನರು ಸಂಚರಿಸುವ ಮಾರ್ಗದಲ್ಲೇ ಕಾಮಗಾರಿ ನಡೆಯುತ್ತಿರುವ ಬಗ್ಗೆ ಹಲವು ಬಾರಿ ಗಮನಕ್ಕೆ ತಂದಿದ್ದರೂ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದೀಗ ಅಮಾಯಕ ಮಹಿಳೆಯೊಬ್ಬರ ಜೀವವೇ ಹೋಗಿದೆ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಳಿಕ ಸ್ಥಳಕ್ಕೆ ಗ್ರಾಮಸ್ಥರು ಜಮಾಯಿಸಿ, ಕಾಮಗಾರಿ ಸ್ಥಳದಲ್ಲಿ ತಕ್ಷಣವೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಘಟನೆಗೆ ಕಾರಣವಾದ ನಿರ್ಲಕ್ಷ್ಯದ ಕುರಿತು ಸಮಗ್ರ ತನಿಖೆ ನಡೆಸಬೇಕು ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ಗುತ್ತಿಗೆದಾರನಿಂದ ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಸೆತುವೆ ಕಾಮಗಾರಿ ಪ್ರಾರಂಭವಾಗಬೇಕು. ರಸ್ತೆ ಹಾಗೂ ಪಾದಚಾರಿಗಳ  ಸಂಚಾರಕ್ಕೆ ಸೂಕ್ತ ಕ್ರಮವಹಿಸಬೇಕೆಂದು ಅಗ್ರಹಿಸಿ ಗ್ರಾಮಸ್ಥರು ಶವದ ವಾಹನದೊಂದಿಗೆ ಪ್ರತಿಭಟನೆ ನಡಿಸಿದರು. 

ಪ್ರತಿಭಟನೆಯ ಬಿಸಿ ಅರಿತ ಬೈಲಹೊಂಗಲ ಲೊಕೋಪಯೋಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ತಮ್ಮ ಬೇಡಿಕೆ ಈಡೆರಿಸುವ ಭರವಸೆ ನೀಡಿದ ನಂತರ ಮೃತ ಮಹಿಳೆಯ ಅಂತ್ಯಸಂಸ್ಕಾರ‌ ನಡೆಯಿತು. ಸ್ಥಳಕ್ಕೆ ಆಗಮಿಸಿದ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು‌ ಅಲ್ಲಿಯ ಅವ್ಯವಸ್ಥೆ ಹಾಗೂ ಯಾವುದೆ ಮುಂಜಾಗ್ರತಾ ಕ್ರಮ ಇಲ್ಲದರ ಬಗ್ಗೆ ಪರೀಶಿಲಿಸಿದರು.

ಈ‌‌ ಸಂದರ್ಭದಲ್ಲಿ ಗ್ರಾಮಸ್ಥರಾದ ಸೋಮಲಿಂಗಪ್ಪ ಮೆಳ್ಳಿಕೇರಿ, ಫಕೀರಗೌಡ ಸಿದ್ದನಗೌಡರ, ಬಸವರಾಜ ಪೇಂಟೇದ, ಗುರುಪಾದ ಕಳ್ಳಿ, ಮಡಿವಾಳಪ್ಪ ಚಳಕೊಪ್ಪ, ಷಣ್ಮುಖ ಶಿರೆಣ್ಣವರ,  ಬಸವರಾಜ ವಿವೇಕಿ, ಪ್ರಶಾಂತ ಹುಂಬಿ, ಶಿವಪ್ಪ ಚಳಕೊಪ್ಪ, ಸೋಮಶೇಯ ಬುಡಶೆಟ್ಟಿ, ಅಪ್ಪು ಈಳಿಗೇರ,ಶ್ರೀಶೈಲ ಬಾಳೆಕುಂದರಗಿ, ಪುಂಡಲಿಕ ಕುದರಿ, ಸಂಜುಗೌಡ ಪಾಟೀಲ,  ಸೋಮು ವಿವೇಕಿ, ಸೋಮಲಿಂಗ ಚಳಕೊಪ್ಪ, ಸೇರಿದಂತೆ ಗ್ರಾಮಸ್ಥರ ಇದ್ದರು. 

ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳದಲ್ಲಿ ಮುರಗೋಡ ಠಾಣೆಯ ಪಿಎಸ್ಐ ಯಾದವಾಡ, ಸೋಮಲಿಂಗ ಸಂಗೊಳ್ಳಿ‌ ಹಾಗೂ ಶಂಕರ ನಾಯ್ಕ ರಾಯನಾಯ್ಕರ ನೇತೃತ್ವದಲ್ಲಿ ಪೋಲಿಸ್ ಬಂಧೋಬಸ್ತ್ ಏರ್ಪಡಿಸಿದ್ದರು.

Related Articles

Back to top button